ಫೆಬ್ರವರಿ 27ರಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ?
ಬೆಂಗಳೂರು, ಫೆಬ್ರವರಿ 18; ಬಜೆಟ್ ಅಧಿವೇಶನ ಆರಂಭವಾಗುವ ಮೊದಲು ಮೇಕೆದಾಟು ಪಾದಯಾತ್ರೆ ಪೂರ್ಣಗೊಳಿಸಲು ಕರ್ನಾಟಕ ಕಾಂಗ್ರೆಸ್ ತೀರ್ಮಾನಿಸಿದೆ. ಫೆಬ್ರವರಿ 27ರಿಂದ ಪಾದಯಾತ್ರೆ ಮತ್ತೆ ಆರಂಭಿಸಲು ಪಕ್ಷ ಚಿಂತನೆ ನಡೆಸಿದೆ.
ಮಾರ್ಚ್ ಮೊದಲ ವಾರದಲ್ಲಿ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಮಾರ್ಚ್ 4 ಅಥವ 7ರಂದು 2022-23ನೇ ಸಾಲಿನ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.
ಇದಕ್ಕೂ ಮೊದಲು ಮೇಕೆದಾಟು ಪಾದಯಾತ್ರೆಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಜನವರಿ 9 ರಿಂದ 13ರ ತನಕ ಪಾದಯಾತ್ರೆ ನಡೆಸಿ ರಾಮನಗರದಲ್ಲಿ ಮೊಟಕುಗೊಳಿಸಲಾಗಿತ್ತು. ಈಗ ಅಲ್ಲಿಂದಲೇ ಪಾದಯಾತ್ರೆ ಆರಂಭಿಸಲಾಗುತ್ತದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು, "ಬಜೆಟ್ ಅಧಿವೇಶನದೊಳಗೆ ಮೇಕೆದಾಟು ಪಾದಯಾತ್ರೆ ಪೂರ್ಣಗೊಳಿಸಲು ತೀರ್ಮಾನಿಸಿದ್ದೇನೆ. ಅದರಂತೆ ಫೆಬ್ರವರಿ 27ರಿಂದ ಪಾದಯಾತ್ರೆ ಆರಂಭಿಸುವ ಕುರಿತು ಚರ್ಚೆ ನಡೆದಿದೆ" ಎಂದು ಹೇಳಿದ್ದಾರೆ.

ಪಾದಯಾತ್ರೆ ಪೂರ್ಣಗೊಳಿಸುತ್ತೇವೆ
ಜನವರಿ 13ರಂದು ರಾಮನಗರದಲ್ಲಿ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಲಾಗಿತ್ತು. ಆಗ ಮಾತನಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ರಾಜ್ಯದಲ್ಲಕೊರೊನಾ ಸೋಂಕು ಕಡಿಮೆಯಾದ ಬಳಿಕ ರಾಮನಗರದಿಂದಲ್ಲೇ ಪಾದಯಾತ್ರೆ ಮುಂದುವರಿಸಲಾಗುವುದು. ಯಾರೊಬ್ಬರೂ ಉತ್ಸಾಹ ಕಳೆದುಕೊಳ್ಳಬೇಡಿ. ಮುಂದೆ ಇಲ್ಲಿಂದಲ್ಲೇ ಪಾದಯಾತ್ರೆ ಶುರುಮಾಡಿ, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲೇ ಅಂತ್ಯಗೊಳಿಸುತ್ತೇವೆ" ಎಂದು ಹೇಳಿದ್ದರು.

ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದೆ
ಕೋವಿಡ್ 3ನೇ ಅಲೆ ನಡುವೆ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಜನರ ಆರೋಗ್ಯದ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ಈಗ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದೆ, ಕೋವಿಡ್ ನಿರ್ಬಂಧಗಳನ್ನು ಸರ್ಕಾರ ಸಡಿಲಗೊಳಿಸಿದೆ. ಆದ್ದರಿಂದ ಪಾದಯಾತ್ರೆಯನ್ನು ರಾಮನಗರದಿಂದ ಪುನಃ ಆರಂಭಿಸಿ ಬೆಂಗಳೂರಿನಲ್ಲಿ ಅಂತ್ಯಗೊಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 1579 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24 ಗಂಟೆಯಲ್ಲಿ 5079 ಜನರು ಡಿಸ್ಚಾರ್ಜ್ ಆಗಿದ್ದಾರೆ. 23 ಜನರು ಮೃತಪಟ್ಟಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 19,761 ಆಗಿದೆ.

ಸಂಗಮದಿಂದ ಆರಂಭವಾಗಿದ್ದ ಪಾದಯಾತ್ರೆ
ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಜನವರಿ 9ರಂದು ಮೇಕೆದಾಟುವಿನ ಸಂಗಮ ಬಳಿ 11 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿತ್ತು. ಪಾದಯಾತ್ರೆ 4 ದಿನ ಪೂರೈಸಿ ರಾಮನಗರ ತಲುಪಿತ್ತು. ಆದರೆ ಕೋವಿಡ್ ಪರಿಸ್ಥಿತಿ ಕಾರಣ ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ಮೊಟಕುಗೊಳಿಸಿದ್ದರು. ರಾಮನಗರ ತಲುಪಿದ್ದ ಪಾದಯಾತ್ರೆಯ 5ನೇ ಆರಂಭವಾಗಲಿಲ್ಲ. ಒಟ್ಟು 160 ಕಿ. ಮೀ. ಪಾದಯಾತ್ರೆ ಇದಾಗಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಬೇಕಿತ್ತು. ಈಗ ರಾಮನಗರದಿಂದಲೇ ಮತ್ತೆ ಪಾಯಾತ್ರೆ ಆರಂಭಿಸಲು ತೀರ್ಮಾನ ಮಾಡಲಾಗಿದೆ.

ಹೈಕೋರ್ಟ್‌ಗೆ ಅರ್ಜಿ, ಸರ್ಕಾರದ ಆದೇಶ
ಕೋವಿಡ್ ಪರಿಸ್ಥಿತಿಯಲ್ಲಿ ಸಾವಿರಾರು ಜನರ ಜೊತೆ ನಡೆಯುತ್ತಿರುವ ಪಾದಯಾತ್ರೆ ನಿಲ್ಲಿಸಲು ಹೈಡ್ರಾಮ ನಡೆದಿತ್ತು. ಪಾದಯಾತ್ರೆಗೆ ತಡೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರ ಆರೋಗ್ಯದ ಹಿತದೃಷ್ಟಿಯಿಂದ, ವಿರೋಧ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಕೈಬಿಟ್ಟು, ಒಗ್ಗಟ್ಟಿನಿಂದ ಸಾಂಕ್ರಾಮಿಕ ಎದುರಿಸಲು ಸಹಕಾರ ನೀಡಬೇಕು ಎಂದು ಸಹ ಪತ್ರ ಬರೆದು ಮನವಿ ಮಾಡಿದ್ದರು.

ಡಿ. ಕೆ. ಶಿವಕುಮಾರ್ ಹೇಳಿಕೆ
ಪಾದಯಾತ್ರೆ ಮೊಟಕುಗೊಳಿಸಿದ ಬಳಿಕ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ನಮ್ಮ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಅಷ್ಟೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯ ಎನ್ನುವಂತಿಲ್ಲ. ಮತ್ತೆ ಇಲ್ಲಿಂದಲೇ ಯಾತ್ರೆ ಮುಂದುವರಿಯಲಿದೆ" ಎಂದು ಹೇಳಿದ್ದರು.
ಪಾದಯಾತ್ರೆ ಮುಂದುವರೆಸಲು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ. ಆದರೆ ಯಾವಾಗ ಆರಂಭವಾಗಲಿದೆ? ಎಂದು ದಿನಾಂಕ ಅಂತಿಮಗೊಳ್ಳಬೇಕಿದೆ.












Click it and Unblock the Notifications