KC Venugopal: ಮುಡಾ ಕೇಸ್ ಇಡಿ ತನಿಖೆ: ಕಾಂಗ್ರೆಸ್ ತಳಮಳ ತಣ್ಣಗಾಗಿಸಲು ಕೆಸಿ ವೇಣುಗೋಪಾಲ್ ಬೆಂಗಳೂರಿಗೆ...
ಬೆಂಗಳೂರು, ಅಕ್ಟೋಬರ್ 04: ರಾಜ್ಯ ರಾಜಕಾರಣದಲ್ಲಿ ಅತೀವ ಚರ್ಚೆಗೆ ಕಾರಣವಾದ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಎಂಟ್ರಿ ಆಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಗೊಂದಲ ಹೆಚ್ಚಾಗಿದೆ. ಇದರ ನಿವಾರಣೆಗೆ, ಮುಂದೆ ಏನಾಗಲಿದೆ?, ಏನು ಮಾಡಬೇಕು? ತನಿಖೆ, ಸಿಎಂ ಹುದ್ದೆ ವಿಚಾರಗಳ ಚರ್ಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿ ಮಹತ್ವದ ಸಭೆ ನಡೆಸಲಿದ್ದಾರೆ.
ಹೌದು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರ ತನಿಖೆ ಜೊತೆಗೆ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ಒಳಗೆ ತಳಮಳ ಉಂಟಾಗಲು ಕಾರಣವಾಗಿದೆ.

ರಾಜ್ಯ ನಾಯಕರ ಜೊತೆಗೆ ಅನೇಕ ವಿಷಯಗಳನ್ನು ಚರ್ಚಿಸಿಲು ಕೇಂದ್ರ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರು ಆದ ಕೆಸಿ ವೇಣುಗೋಪಾಲ್ ಅವರು ಅಕ್ಟೋಬರ್ 15 ಇಲ್ಲವೇ 16ರಂದು ಬೆಂಗಳೂರುಗೆ ಬರಲಿದ್ದಾರೆ. ಮಹತ್ವದ ಸಭೆ ನಡೆಸುವ ಜೊತೆಗೆ ರಾಜ್ಯ ನಾಯಕರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಡಿ ದಾಳಿಯಿಂದ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೇ, ಸಿದ್ದರಾಮಯ್ಯ ಆಪ್ತರು ತೊಂದರೆಗೆ ಒಳಗಾಗುವ ನಿರೀಕ್ಷೆಗಳು ಇವೆ. ಹೀಗಾದರೆ ಆಡಳಿತ ಯಂತ್ರದ ಮೇಲಾಗುವ ಪರಿಣಾಮ, ಜನರು ಸರ್ಕಾರವನ್ನು, ಆಡಳಿತ ನೋಡುವ ರೀತಿ, ಇದೆಲ್ಲವನ್ನು ಕಾನೂನಾತ್ಮಕವಾಗಿ ಎದುರಿಸುವ ಬಗೆ, ಮುಂದೇನು ಆಗಲಿದೆ ಎಂಬುದನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ.
ಸಭೆಗೆ ರಾಜ್ಯ ನಾಯಕರು ಯಾರೆಲ್ಲ ಭಾಗಿ
ಈ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೆಲವು ಸಚಿವರು ಸೇರಿದಂತೆ ರಾಜ್ಯದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಡಿ ತನಿಖೆ ತೀವ್ರ ರೂಪದಲ್ಲಿ ಮುಂದುವರಿದರೆ, ಪಕ್ಷದ ಆಂತರಿಕ ಸ್ಥಿತಿ ಏನಾಗಬಹುದು ಎಂಬುದರ ಮೇಲೆ ಸಭೆ ಗಮನ ಹರಿಸಲಿದೆ ಎನ್ನಲಾಗಿದೆ.
ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ಹೊರ ಬೀಳುತ್ತಿದ್ದಂತೆ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಎಂಬ ಕೂಗು ಎದ್ದಿದೆ. ದಿನೇ ದಿನೆ ಒತ್ತಡ ಹೆಚ್ಚಾಗುತ್ತಿದೆ. ಇತ್ತ ಸಿಎಂ ಹುದ್ದೆಗೆ ಏರಲು ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಬಗ್ಗೆ ಕೆಸಿ ವೇಣುಗೋಪಾಲ್ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಲಿದೆ.
ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ?
ಈಗಾಗಲೇ ಸಿಎಂ ಹುದ್ದೆ ಆಕಾಂಕ್ಷಿಗಳಾದ ಸತೀಶ್ ಜಾರಕಿಹೊಳಿ, ಎಚ್‌ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರು ಗುಪ್ತ ಸಭೆ ಮಾಡಿದ್ದಾರೆ. ಹಲವು ವಿಷಯ ಚರ್ಚಿಸಿದ್ದಾರೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸ್ಥಿತಿ ಬಂದರೆ, ಆಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪದೋನ್ನತಿ ಸಿಕ್ಕರೆ ತಮ್ಮ ನಿಲವು ಕುರಿತು ಸಚಿವರು ಈಗಾಗಲೇ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿ ತಂದು ಅಭಿವೃದ್ಧಿ ನಿಲ್ಲಿಸಿದೆ ಎಂಬ ಬಿಜೆಪಿ ಆರೋಪದ ನಡುವೆ, ನಾಯಕರ ಮೇಲಿನ ಭ್ರಷ್ಟಾಚಾರ, ಅಧಿಕಾರಿಗಳ ಆತ್ಮಹತ್ಯೆ, ಮುಡಾ ಪ್ರಕರಣ, ತನಿಖೆಗಳಿಂದ ರಾಜ್ಯದ ಆಡಳಿತ ಯಂತ್ರ ಸುಗಮವಾಗಿ ಸಾಗಲು ಸಾಧ್ಯವಾಗದಂತಾಗಿದೆ. ಸರ್ಕಾರ ಗೊಂದಲದಲ್ಲಿ ಮುಳುಗಿದಂತೆ ಕಾಣುತ್ತಿದೆ.












Click it and Unblock the Notifications