ಕರ್ನಾಟಕ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧ
ಬೆಂಗಳೂರು, ಮಾ. 25 : ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿರುವ ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರದತ್ತ ಗಮನಹರಿಸಿದೆ. ರಾಜ್ಯದಲ್ಲಿ ಪ್ರಚಾರ ನಡೆಸಲಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷ ಸಿದ್ಧಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಸೋನಿಯಾ, ರಾಹುಲ್, ರಮ್ಯಾ, ಚಿರಂಜೀವಿ ಮುಂತಾದವರು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ.ಮನಮೋಹನ್‌ಸಿಂಗ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್‌ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ 40 ಜನರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕರು ಇವರು... (ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ)

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಪುನಃ ಅಧಿಕಾರಕ್ಕೆ ತರುವ ಹೊಣೆ ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದ ತುಂಬಾ ಪ್ರಚಾರ ನಡೆಸಲಿದ್ದಾರೆ. ಅದರಂತೆ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲೂ ಸೋನಿಯಾ ಗಾಂಧಿ ಪ್ರಚಾರ ನಡೆಸಲಿದ್ದಾರೆ.

ರಾಹುಲ್ ಪ್ರಮುಖ ಆಕರ್ಷಣೆ
ಕಾಂಗ್ರೆಸ್ ಯುವರಾಜ ಮತ್ತು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಡಂತೆ ದೇಶದ ತುಂಬಾ ಸಂಚರಿಸಿ ಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಿಸಬೇಕು ಎಂಬ ಗುರಿ ಹೊಂದಿರುವ ರಾಹುಲ್ ರಾಜ್ಯದಲ್ಲಿ ಸ್ಟಾರ್ ಪ್ರಚಾರಕರಾಗಿ ಮತ ಯಾಚಿಸಲಿದ್ದಾರೆ.

ಮನಮೋಹನ್ ಸಿಂಗ್ ಪ್ರಚಾರ
ಎರಡು ಭಾರಿ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿರುವ ಮನಮೋಹನ್ ಸಿಂಗ್ ಕರ್ನಾಟಕದಲ್ಲಿಯೂ ಪ್ರಚಾರ ನಡೆಸಿ ಯುಪಿಎ ಸರ್ಕಾರ ಸಾಧನೆಯನ್ನು ಜನರಿಗೆ ತಲುಪಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಪ್ರಧಾನಿ ಸಿಂಗ್ ಸ್ಟಾರ್ ಪ್ರಚಾರಕರು.

ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್
ಮಾತಿನಲ್ಲೇ ವಿವಾದವೆಬ್ಬಿಸುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ರಾಜ್ಯದ ಪ್ರಮುಖ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು. ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬೇಕಾದರೆ, ಸಿಂಗ್ ಸಹ ರಾಜ್ಯದಲ್ಲಿ ಮತಯಾಚಿಸಬೇಕು.

ಕರ್ನಾಟಕದ ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಹುದ್ದೆಯಲ್ಲಿ ಕುಳಿತಿರುವ ಸಿದ್ದರಾಮಯ್ಯ ಸಹ ರಾಜ್ಯದ ಸ್ಟಾರ್ ಪ್ರಚಾರಕರು. ಮುಖ್ಯಮಂತ್ರಿಯಾದ ನಂತರ ತಾವು ಅಧಿಕಾರಕ್ಕೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಮುಂತಾದ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತ ನೀಡುವಂತೆ ಸಿಎಂ ಮನವಿ ಮಾಡಲಿದ್ದಾರೆ.

ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹ ರಾಜ್ಯದ ಪ್ರಮುಖ ಸ್ಟಾರ್ ಪ್ರಚಾರಕರು. ದಲಿತ ವರ್ಗದ ಮತಗಳನ್ನು ಸೆಳೆಯಲು ಪರಮೇಶ್ವರ್ ರಾಜ್ಯದ ತುಂಬಾ ಪ್ರಚಾರ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತ ಕೇಳಬೇಕು.

ಬರ್ತಾರೆ ಮೆಗಾಸ್ಟಾರ್ ಚಿರಂಜೀವಿ
ಕೇಂದ್ರ ಸಚಿವ ಮತ್ತು ತೆಲಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕರ್ನಾಟಕದಲ್ಲಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಚಿರಂಜೀವಿ ಕರ್ನಾಟಕದಲ್ಲಿ ಮತಗಳನ್ನು ಸೆಳೆದಿದ್ದರು. ಲೋಕಸಭೆ ಚುನಾವಣೆಯಲ್ಲಿಯೂ ಚಿರಂಜೀವಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

ಮಂಡ್ಯ ಸಂಸದೆ ರಮ್ಯಾ
ಕಳೆದ ಉಪ ಚುನಾವಣೆಯಲ್ಲಿ ಮಂಡ್ಯದಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದ ರಮ್ಯಾ ಕಾಂಗ್ರೆಸ್ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷದ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿರುವ ರಮ್ಯಾ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದವರು. ರಾಜ್ಯದ ತುಂಬಾ ರಮ್ಯಾ ಸಂಚಾರ ನಡೆಸಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ.

ಮತಯಾಚಿಸಲಿದ್ದಾರೆ ಎಸ್.ಎಂ.ಕೃಷ್ಣ
ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಕೃಷ್ಣ ಅವರಿಗೆ ನಾಡಿನ ಜನರು ಚಿರಪರಿಚಿತ ಆದ್ದರಿಂದ ಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲಿದ್ದಾರೆ.

ಮತ ಬೇಟೆಯಾಡಲಿದ್ದಾರೆ ಮೊಯ್ಲಿ
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಬೇಟೆಯಾಡಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಮೊಯ್ಲಿ, ಯುಪಿಎ ಸರ್ಕಾರದ ಭಾಗವಾಗಿ ಕೆಲಸ ಮಾಡಿದ್ದಾರೆ. ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ.

ಇತರ ಸ್ಟಾರ್ ಪ್ರಚಾರಕರು
ಇವರು ಪ್ರಮುಖ ಸ್ಟಾರ್ ಪ್ರಚಾರಕರಾದರೆ ಇನ್ನೂ ಹಲವು ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಕೇರಳ ಸಿಎಂ ಉಮ್ಮನ್ ಚಾಂಡಿ, ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌಹಾಣ್, ಕೇಂದ್ರ ಸಚಿವರಾದ ಗುಲಾಂನಬಿ ಆಜಾದ್, ಅಂಬಿಕಾ ಸೋನಿ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಚಿತ್ರನಟಿಯರಾದ ಜಯಮಾಲಾ, ಭವ್ಯಾ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ.












Click it and Unblock the Notifications