ಕರ್ನಾಟಕಕ್ಕೆ ಕೈತಪ್ಪಿದ ದೇಶದ ಅತೀ ದೊಡ್ಡ OLA ಇವಿ ವಾಹನ ಉತ್ಪಾದನಾ ಘಟಕ: ಬಿಜೆಪಿಗೆ ತರಾಟೆ
ಓಲಾ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಸದ್ಯ ತಮಿಳುನಾಡಿನ ಪಾಲಾಗಿದೆ. ತಮಿಳುನಾಡು ಮುತುವರ್ಜಿ ವಹಿಸಿದ್ದರಿಂದ ಅವರೊಂದಿಗೆ ಓಲಾ ಬೃಹತ್ ಹೂಡಿಕೆಗೆ ಕೈ ಜೋಡಿಸಿದೆ. ಬಿಜೆಪಿ ಸರ್ಕಾರದ ಧೋರಣೆಯಿಂದ ಓಲಾ ಒಡಂಬಡಿಕೆ ಕೈ ತಪ್ಪಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬೆಂಗಳೂರು, ಫೆಬ್ರವರಿ 20: ಓಲಾ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಸದ್ಯ ತಮಿಳುನಾಡಿನ ಪಾಲಾಗಿದೆ. ನೆರೆಯ ರಾಜ್ಯ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಅಲ್ಲಿ ಕೋಟಿಗಟ್ಟಲೇ ಹೂಡಿಕೆ ಮಾಡಿ ಘಟಕ ಸ್ಥಾಪಿಸಲಾಗುತ್ತಿದೆ. ಈ ವಿಚಾರವಾಗಿ ಕರ್ನಾಟಕ ಬಿಜೆಪಿ ಸರ್ಕಾರವನ್ನು ಎಂದು ಕಾಂಗ್ರೆಸ್ ಸೇರಿದಂತೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯು ನೆರೆಯ ತಮಿಳುನಾಡು ಸರ್ಕಾರವು 7,614 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಲ್ಲಿ ದ್ವಿಚಕ್ರ ವಾಹನ ಸೇರಿದಂತೆ ವಿದ್ಯುತ್ ಚಾಲಿತ ವಾಹನಗಳು ಸಿದ್ಧಗೊಳ್ಳಲಿವೆ. ಇದರಿಂದ ಆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
ಆದರೆ ಕರ್ನಾಟಕ ಸರ್ಕಾರವು ನಾಲ್ಕು ಚಕ್ರಗಳು ಮತ್ತು ಲಿಥಿಯಂ ಸೆಲ್ ಗಿಗಾಫ್ಯಾಕ್ಟರಿಗಳೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಹಬ್ ಅನ್ನು ಸ್ಥಾಪಿಸುವ ಅವಕಾಶವೊಂದನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಇದೇ ವಿಚಾರವಾಗಿ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ದೇಶದ ಅತೀ ದೊಡ್ಡ ಇವಿ ವಾಹನ ತಯಾರಿಕಾ ಘಟಕವನ್ನು ಕರ್ನಾಟಕ ಕಳೆದುಕೊಂಡಿದೆ. ರಾಜ್ಯವು ಭಾರತದಲ್ಲಿ ಮೊದಲ ಇವಿ ನೀತಿಯನ್ನು ಹೊಂದಿದ್ದರೂ ಇಂತದ್ದೊಂದು ನಷ್ಟ ಅನುಭವಿಸಿದ್ದೇವೆ. ಏಕೆ ಇವಿ ವಾಹನ ಘಟಕ ಕೈತಪ್ಪಿದೆ ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲೂ ಅಧಿಕ ಸೇವೆ ನೀಡುತ್ತಿರುವ ಓಲಾ ಕಂಪನಿ ಇದೀಗ ತಮಿಳುನಾಡಿನಲ್ಲಿ ಭಾರೀ ಬಂಡವಾಳ ಹೂಡಿ ಮಾಡಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಮತ್ತು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕರ್ನಾಟಕದಲ್ಲಿ ಇವಿ ನೀತಿಗೆ ಪಾರ್ಶ್ವವಾಯು ಆದಂತಿದೆ. ಹೂಡಿಕೆದಾರರನ್ನು ಮನವೊಲಿಸಲು ಮತ್ತು ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಒದಗಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಇದರಿಂದ ಅರ್ಥವಾಗುತ್ತಿದೆ. ವ್ಯಾಪಾರ ಮಾಡಲು ಸುಲಭವಾಗುವುದು ಕೇವಲ 40 ಪರ್ಸೆಂಟ್ ಮಾತ್ರವಾ ಎಂದು ಖರ್ಗೆ ಪ್ರಶ್ನಿಸಿದರು.

2000 ಎಕರೆ ಪ್ರದೇಶದಲ್ಲಿ ಬೃಹತ್ ಘಟಕ
ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿಯಲ್ಲಿ ಒಟ್ಟು ಸುಮಾರು 2000 ಎಕರೆ ಪ್ರದೇಶದ ಒಂದೇ ಕಡೆ ಇವಿ ವಾಹನ ಉತ್ಪಾದನಾ ಘಟಕ ಸ್ಥಾಪನೆಗೆ ತಮಿಳುನಾಡು ಸರ್ಕಾರ ಓಲಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇದರಿಂದ ತಮಿಳುನಾಡಿನ 3000ಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರೆಯಲಿದೆ. ಈ ಕಂಪನಿಯ ಓಲಾ ಸ್ಕೂಟರ್ ಘಟಕ ಬೆಂಗಳೂರಿಗೆ ಹೊಂದಿಕೊಂಡ ತಮಿಳುನಾಡಿನ ಹೊಸೂರಲ್ಲಿದೆ. ಸದ್ಯ ಸ್ಕೂಟರ್ ಇದ್ದು, ಮುಂದಿನ ದಿನಗಳಲ್ಲಿ ಓಲಾ ಇವಿ ಕಾರು ಸಹ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯ ದೇಶದ ಅತೀ ದೊಡ್ಡ ಕಂಪನಿಯ ಒಡಂಬಡಿಕೆಯೊಂದು ಕರ್ನಾಟಕಕ್ಕೆ ತಪ್ಪಿಹೋಗಿದೆ.












Click it and Unblock the Notifications