Breaking; ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಮೊದಲ ಮತ ಹಾಕಿದ ಡಿಕೆಶಿ
ಬೆಂಗಳೂರು, ಅಕ್ಟೋಬರ್ 17; ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಚುನಾವಣಾ ಕಣದಲ್ಲಿದ್ದು, ಸಂಜೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಮತದಾನ ಆರಂಭವಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮೊದಲ ಮತ ಚಲಾವಣೆ ಮಾಡಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವು ಕಟಿಬದ್ಧವಾಗಿದೆ. ಪಕ್ಷದ ಭದ್ರ ಅಡಿಪಾಯ ಹಾಗೂ ಸಿದ್ಧಾಂತಗಳಿಗೆ ಇಂದಿನ ದಿನವು ಮತ್ತೊಂದು ಉದಾಹರಣೆಯಾಗಿದೆ.ಇಂದು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನನ್ನ ಮತವನ್ನು ಚಲಾಯಿಸಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಕರ್ನಾಟಕ-ಆಂಧ್ರ ಪ್ರದೇಶ ಗಡಿಯ ಸಂಗನಕಲ್ಲುವಿನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡವರು ಮತದಾನ ಮಾಡುತ್ತಿದ್ದಾರೆ.
22 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮತದಾನ ನಡೆಯುತ್ತಿದೆ. 2000ನೇ ಇಸವಿಯಲ್ಲಿ ನಡೆದ ಮತದಾನದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ಕಣದಲ್ಲಿದ್ದರು. ಚುನಾವಣೆಯಲ್ಲಿ ಸೋನಿಯಾ ಗಾಂಧಿ 7,448 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.
Congress Party has always stood for democracy and today is another example of its solid foundation & ideology.
— DK Shivakumar (@DKShivakumar) October 17, 2022
Cast my vote for the Congress Presidential Election today. pic.twitter.com/xtlflCuyhs
ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯೇ ನಡೆಯುತ್ತಿತ್ತು. ಈ ಬಾರಿ ಗಾಂಧಿ ಕುಟುಂಬದ ಯಾವ ನಾಯಕರೂ ಸಹ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ ಬಳಿಕ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ.
ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆಯ್ಕೆಗೊಂಡ ವಿವಿಧ ಸದಸ್ಯರು, ಎಐಸಿಸಿ ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಸೇರಿದಂತೆ 9,100 ಜನರು ಮತದಾನ ಮಾಡಲಿದ್ದಾರೆ.
ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ. 200 ಮತಗಳಿಗೆ ಒಂದು ಮತಗಟ್ಟೆಯಂತೆ 67 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕರ್ನಾಟಕ-ಆಂಧ್ರ ಪ್ರದೇಶ ಗಡಿಯ ಸಂಗನಕಲ್ಲುವಿನಲ್ಲಿ ಮತದಾನ ಮಾಡುತ್ತಿದ್ದಾರೆ. ಯಾತ್ರೆಯಲ್ಲಿ ಪಾಲ್ಗೊಂಡವರು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications