ಸತೀಶ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿ ಅನಾವರಣ: ನಳಿನ್
ಬೆಂಗಳೂರು, ನವೆಂಬರ್ 8: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಎಂಬ ಪದ ಅಶ್ಲೀಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಅನಾವರಣಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಖಂಡಿಸಿದ್ದಾರೆ.
ಈ ರೀತಿಯಾಗಿ ಹಿಂದೂಗಳನ್ನು ಟೀಕಿಸುವ ಮಾನಸಿಕತೆಯನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದೆ. ಹಿಂದೂಗಳನ್ನು ಅವಮಾನಿಸುವುದು, ಕಡೆಗಣಿಸುವುದನ್ನು ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಸೂಚಿಯಾಗಿ ಪಾಲಿಸುತ್ತಲೇ ಬಂದಿದೆ ಎಂದು ಆಕ್ಷೇಪಿಸಿದ್ದಾರೆ.
ಹಿಂದೂ ಎಂಬುದು ಭಾರತದ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸತೀಶ್ ಜಾರಕಿಹೊಳಿ ಅವರು ಹಾಗಿದ್ದರೆ ಸುಪ್ರೀಂ ಕೋರ್ಟಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ್ದಾರೆ. ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಧರ್ಮದ ಬಗ್ಗೆ ಇದೊಂದು ಜೀವನ ಪದ್ಧತಿ ಎಂದು ಹಲವೆಡೆ ಉಲ್ಲೇಖಿಸಿದ್ದಾರೆ, ಹಿಂದೂಗಳು ಒಗ್ಗಟ್ಟಾಗಬೇಕೆಂದು ಅವರು ತಿಳಿಸಿದ್ದರು. ಆ ಮೂಲಕ ರಾಷ್ಟ್ರ ರಕ್ಷಣೆ ಆಗಲಿದೆ ಎಂದು ತಿಳಿಸಿದ್ದರು ಎಂದು ಹೇಳಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹಿಂದೂ ಧರ್ಮ ಮಾತ್ರವಲ್ಲ, ಪೂರ್ವಜರಿಗೂ ಅವಮಾನ ಮಾಡಿದ್ದಾರೆ: ರಾಜ್ ಕುಮಾರ್ ತೇಲ್ಕೂರ್
ಇದೇ ವಿಚಾರವಾಗಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ, ''ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನ ಬಿಜೆಪಿ ಖಂಡಿಸುತ್ತದೆ. ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತೆ, ಕಾಂಗ್ರೆಸ್ ಮೊದಲಿನಿಂದಲೂ ಹಿಂದೂ ಧರ್ಮ ಕಡೆಗಣಿಸೋ ಕೆಲಸ ಮಾಡ್ತಿದೆ. ಸತೀಶ್ ಜಾರಕಿಹೊಳಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ, ಅವರು ಹಿಂದೂ ಧರ್ಮ ಮಾತ್ರವಲ್ಲ, ಪೂರ್ವಜರಿಗೂ ಅವಮಾನ ಮಾಡಿದ್ದಾರೆ'' ಎಂದರು.

ಸುಪ್ರೀಂ ಕೋರ್ಟ್ ಕೂಡ ಹಿಂದೂ ಧರ್ಮ ಅಂದ್ರೆ ವೇ ಆಫ್ ಲೈಫ್ ಅಂತ ತಿಳಿಸಿದೆ,ಅಂಬೇಡ್ಕರ್ ಹೇಳಿದ್ದಾರೆ ಹಿಂದೂಗಳು ಒಗ್ಗಟ್ಟಾಗಿ ಬಾಳಬೇಕು ಅಂತ. ಹಿಂದೂ ಧರ್ಮದಲ್ಲಿ ಹುಟ್ಟಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ.ಹಿಂದೂ ಧರ್ಮದವರಿಗೆ ಬೇಷರತ್ ಕ್ಷಮೆ ಕೇಳಬೇಕು, ಕೇಳದಿದ್ರೆ ರಾಜ್ಯದೆಲ್ಲೆಡೆ ಕೇಸ್ ಹಾಕ್ತೀವಿ.ಸತೀಶ್ ಜಾರಕಿಹೊಳಿ ಹೊಡಕು ಮಾಡುವ ಕೆಲಸ ಮಾಡ್ತಿದ್ದಾರೆ. ಕಂಡ ಕಂಡಲ್ಲಿ ಅವರನ್ನು ಹಿಂದೂ ಧರ್ಮ ವಿರೋಧಿಸಲಾಗುವುದು. ಒಂದು ಕಡೆ ಭಾರತ್ ಜೋಡೋ ಅಂತಾರೆ, ಮಾಡ್ತಿರೋದೆಲ್ಲಾ ತೋಡೋ, ಕಾಂಗ್ರೆಸ್ ನವರು ಈ ಬಗ್ಗೆ ಮಾತಾಡೋದು ಬಿಟ್ಟು ಹಿಂದೆ ಸರೀತಿದಾರೆ ಎಂದರು.












Click it and Unblock the Notifications