ಕಾಂಗ್ರೆಸ್ ಸಂಸದರ ಸಭೆ ಕರೆಯಲು ಸಿಎಂ, ಡಿಸಿಎಂಗೆ ಒತ್ತಾಯ
ಬೆಂಗಳೂರು, ಜೂನ್ 21: ಬೆಂಗಳೂರಿನ ಸಂಸದ ಹಾಗೂ ಶಾಸಕರ ಸಭೆ ಕರೆದಂತೆ ರಾಜ್ಯದ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರ ಸಭೆ ಕರೆಯುವಂತೆ ಕೈ ಸಂಸದರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಸಂಸದರಾದ ಬಿಕೆ ಹರಿಪ್ರಸಾದ್ ಮತ್ತು ಚಂದ್ರಶೇಖರ್ ಅವರು ನಿನ್ನೆ ಕುಮಾರ ಕೃಪಾದಲ್ಲಿ ನಡೆದ ಶಾಸಕ ಹಾಗೂ ಸಂಸದರ ಸಭೆಯಲ್ಲಿ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಕೂಡಲೇ ಸಂಸದರ ಸಭೆ ಕರೆದು ಆಯಾ ಕ್ಷೇತ್ರಗಳಲ್ಲಿ ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಮಾಡಬೇಕು ಎಂಬುದು ಅವರ ಒತ್ತಾಯ.

ಅಲ್ಲದೆ ಚುನಾವಣೆ ಹತ್ತರಿವಿರುವ ಕಾರಣ ಮುಂದಿನ ಬಜೆಟ್‌ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಸಂಸದರು ತಮ್ಮ ಅನುದಾನ ಖರ್ಚು ಮಾಡುವಲ್ಲಿ ರಾಜ್ಯ ಸರ್ಕಾರ ನೆರವು ನೀಡಬೇಕು ಎಂಬ ಒತ್ತಾಯವನ್ನೂ ಕಾಂಗ್ರೆಸ್ ಸಂಸದರು ಮಾಡಿದ್ದಾರೆ.
ಲೋಕಸಭಾ ಚುನಾವಣೆ ಮುಗಿದು ಈಗಾಗಲೇ 4 ವರ್ಷ ದಾಟಿದ್ದು, ಈ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರವು ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಸಂಸದರು ಚುರುಕುಗೊಂಡಿದ್ದು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರದ ನೆರವು ಬಯಸುತ್ತಿದ್ದಾರೆ.












Click it and Unblock the Notifications