ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ಬಡಿದಾಟ, ಆಸ್ಪತ್ರೆಗೆ ದಾಖಲು?
ಬೆಂಗಳೂರು, ಜನವರಿ 20 : ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರು ಬಡಿದಾಡಿಕೊಂಡಿದ್ದಾರೆ. ಒಬ್ಬರು ಶಾಸಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಶನಿವಾರ ರಾತ್ರಿ ಬಡಿದಾಡಿಕೊಂಡಿದ್ದಾರೆ. ಆನಂದ್ ಸಿಂಗ್ ಅವರನ್ನು ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕರು ಪಾರ್ಟಿ ಮಾಡುವ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಟಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆನಂದ್ ಸಿಂಗ್‌ಗೆ ಗಾಯವಾಗಿದ್ದು, ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಪರೇಷನ್ ಕಮಲ, ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ಗಲಾಟೆ ನಡೆದಿದೆ. ಈ ನಡುವೆ ಶಾಸಕರು ಮಾತಿನ ಚಕಮಕಿ ನಡೆಸಿದ್ದಾರೆ. ಬೇರೆ ಶಾಸಕರು ಇಬ್ಬರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ.
Injured MLA Anand Singh relatives and friends are not being allowed to visit him. He is being guarded by Congress official bouncers. What happened in the resort to an elected MLA of Karnataka? Can you please answer the state CM Shri @hd_kumaraswamy? This is heights of waywardness
— BJP Karnataka ITCell (@BJPKarITCell) January 20, 2019
ಡಿ.ಕೆ.ಶಿವಕುಮಾರ್ ಸ್ಪಷ್ಟನೆ : ಶಾಸಕರಿಬ್ಬರ ನಡುವೆ ಗಲಾಟೆ ನಡೆದಿರುವ ಕುರಿತು ಸ್ಪಷ್ಟನೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, 'ಅವರಿಬ್ಬರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಸ್ಪಲ್ಪ ಹೊತ್ತಿನಲ್ಲಿಯೇ ಅವರೇ ಬಂದು ಮಾತನಾಡುತ್ತಾರೆ. ಬಳ್ಳಾರಿಗೆ ಸಿಗಬೇಕಾದ ಅನುದಾನದ ಬಗ್ಗೆ ಚರ್ಚೆಯಾಗಿದೆ' ಎಂದು ಹೇಳಿದ್ದಾರೆ.
ಗಲಾಟೆ ನಡೆದಿಲ್ಲ : ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಯಾವುದೇ ಗಲಾಟೆ ನಡೆದಿಲ್ಲ. ನಡೆದಿದ್ದರೆ ನಮಗೆ ಮಾಹಿತಿ ಬರುತ್ತದೆ. ರೆಸಾರ್ಟ್‌ಗೆ ತೆರಳುತ್ತಿದ್ದೇನೆ' ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications