ರಾಜ್ಯದಲ್ಲಿ ಮತ್ತೆ ಉಚಿತ ಸೈಕಲ್ ವಿತರಣೆ ಯಾವಾಗ?: ಕಾಂಗ್ರೆಸ್ ಶಾಸಕನ ಮಾತಿಗೆ ವಿಪಕ್ಷಗಳು ಜೈ
ಬೆಂಗಳೂರು, ಡಿಸೆಂಬರ್ 07: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿ ನಾಲ್ಕು ದಿನಗಳಾಗಿದ್ದು, ಪ್ರತಿನಿತ್ಯವೂ ಚರ್ಚೆಗಳು ನಡೆಯುತ್ತಲೇ ಇದೆ. ರಾಜ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಪಕ್ಷಗಳು ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಮೇಲಿಂದ ಮೇಲೆ ಪ್ರಶ್ನಿಸುತ್ತಲೇ ಇದ್ದರೆ. ಆಡಳಿತ ಪಕ್ಷವೂ ಸಹ ವಿಪಕ್ಷಗಳನ್ನು ಎದುರಿಸುತ್ತಿದ್ದು, ಪರ-ವಿರೋಧ ಚರ್ಚೆಗಳು ಮುಂದುವರಿಯುತ್ತಲೇ ಇದೆ.
ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಾತಿನ ಸಮರದ ಮಧ್ಯೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮನವಿ ಎಲ್ಲರ ಮೆಚ್ಚುಗೆ ಪಡೆದಿದ್ದು, ವಿಪಕ್ಷ ನಾಯಕರು ಸಹ ಕಾಂಗ್ರೆಸ್ ಶಾಸಕನ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಅಧಿವೇಶನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಈ ಮನವಿಯನ್ನು ಶಿಕ್ಷಣ ಸಚಿವರ ಮುಂದಿಟ್ಟಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದೇನು..?
"ರಾಜ್ಯದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸೈಕಲ್ ವಿತರಣೆಯನ್ನು ನಿಲ್ಲಿಸಲಾಗಿದೆ. ಇಂದು ಅನೇಕ ಹಳ್ಳಿಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಇಲ್ಲ. ಆದ್ದರಿಂದ ಸರ್ಕಾರದಿಂದ ಮಕ್ಕಳಿಗೆ ಸೈಕಲ್ ನೀಡಿದರೆ, ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪುತ್ತಾರೆ. ಹಾಗೂ ಮನೆಗಳಿಗೆ ತೆರಳುತ್ತಾರೆ. ಹೀಗಾಗಿ ಸೈಕಲ್ ವಿತರಣೆಯನ್ನು ಮತ್ತೆ ಆರಂಭಿಸಬೇಕು" ಎಂದು ಮನವಿ ಮಾಡಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಮನವಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರಿಸಿದ್ದು, "ಶಾಲೆಗೆ ದೂರದಿಂದ ಬರುವ ಮಕ್ಕಳಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಆರು ನೂರು ರೂಪಾಯಿ ನೀಡುವ ಕೆಲಸ ಆಗುತ್ತಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಸೈಕಲ್ ವಿತರಣೆ ಆರಂಭಿಸಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ. ನಾನು ವಿವಿಧ ಶಾಲೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಇದೇ ಮನವಿ ಮಾಡುತ್ತಿದ್ದಾರೆ" ಎಂದರು.
"ಇನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಧ್ಯದ ಅವಧಿಯಲ್ಲಿ ಬಂದ ಕಾರಣ ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧರಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಅವಶ್ಯಕತೆ ಇರುವಂತಹ ಒಳ್ಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ವಿವರಿಸಿದ್ದಾರೆ.

ಈ ವೇಳೆ ಮಾತು ಮುಂದುವರಿಸಿದ ಶಾಸಕ ಪ್ರದೀಪ್ ಈಶ್ವರ್, ಸ"ರ್ಕಾರ ಈಗಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಒಂದು ಜೊತೆ ಶೂ ಎರಡು ಜೊತೆ ಸಾಕ್ಸ್ ನೀಡುತ್ತಿದೆ. ದಯಮಾಡಿ ಎರಡು ಜೊತೆ ಶೂ ನಾಲ್ಕು ಜೊತೆ ಸಾಕ್ಸ್ ಕೊಟ್ಟರೆ ವಿದ್ಯಾಥಿಗಳಿಗೆ ನೆರವಾಗುತ್ತದೆ. ಸರ್ಕಾರಿ ಶಾಲೆ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು" ಎಂದಿದ್ದಾರೆ. ಇದಕ್ಕೆ ಶಿಕ್ಷಣ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮಾತಿಗೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್ " ಇಡೀ ರಾಜ್ಯದಲ್ಲಿ ಈ ರೀತಿ ಸೈಕಲ್ ಕೊಡುವುದನ್ನು ನಿಲ್ಲಿಸಿದ್ದಾರೆ. ನಿಮಗೆ ಗೊತ್ತಿದೆ ಎಲ್ಲಾ ಫ್ರೀ ಫ್ರೀ ಮಾಡಿ, ತಾಯಂದಿರೆಲ್ಲ ಬಸ್‌ನಲ್ಲಿ ಹೋದರೆ, ಮಕ್ಕಳು ನಡೆದುಕೊಂಡು ಹೋಗುತ್ತಿದ್ದಾರೆ. ಮೊನ್ನೆ ಕುಮಾರಸ್ವಾಮಿ ಅವರು ಹೇಳಿದರು ಜೆಸಿಬಿಯಲ್ಲಿ ಹೋಗುತ್ತಿದ್ದಾರೆ. ಒಂದು ಕಿಲೋಮೀಟರ್ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಸ್‌ಗಳು ಇರುವುದಿಲ್ಲ. ಸೈಕಲ್ ಕೊಟ್ಟಿದ್ದೇ ಇದೇ ಉದ್ದೇಶಕ್ಕೆ. ಮಕ್ಕಳು ಶಾಲೆಗೆ ಬರಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು" ಎಂದಿದ್ದಾರೆ.

ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ " ಹಿಂದಿನ ಸರ್ಕಾರದಲ್ಲೇ ಇದನ್ನು ನಿಲ್ಲಿಸಲಾಗಿತ್ತು. ಸದ್ಯ ನನಗೆ ಮನವಿ ಬಂದಿದೆ. ಈ ಬಗ್ಗೆ ಯೋಚಿಸಿ ತೀರ್ಮಾನ ಮಾಡಲಾಗುವುದು" ಎಂದಿದ್ದಾರೆ.












Click it and Unblock the Notifications