DK Shivakumar: ಶಾಸಕನ ಪುತ್ರನಿಗೆ ತನ್ನದೇ ಹೆಸರು ನಾಮಕರಣ ಮಾಡಿದ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಪಾಳಯದಲ್ಲಿ ಕನಕಪುರದ ಬಂಡೆ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಛಾಪು ಮೂಡಿಸಿರುವ ರಾಜಕೀಯ ನಾಯಕ. ಡಿಕೆಶಿ ಅಂದ್ರೆ ಒಂದು ರೀತಿಯ ಕ್ರೇಜ್ ಕೂಡ ಇದೆ. ಅವರು ಹೋದ ಕಡೆ ಅಭಿಮಾನಿಗಳು, ಬೆಂಬಲಿಗರು ಜಮಾಯಿಸುವುದು ಗೊತ್ತೇ ಇದೆ. ಇದೀಗ ಡಿ.ಕೆ.ಶಿವಕುಮಾರ್ ಅವರ ಕಟ್ಟಾ ಬೆಂಬಲಗರಾದ ಶಾಸಕರೊಬ್ಬರು ತಮ್ಮ ಪುಟ್ಟ ಕಂದಮ್ಮನಿಗೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಮಗುವಿಗೆ ಹೆಸರಿಟ್ಟು ಭಾವುಕರಾಗಿದ್ದಾರೆ.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ಅವರು ತಮ್ಮ ಮಗುವಿಗೆ "ಶಿವಕುಮಾರ್" ಎಂದು ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ನನ್ನ ಹೆಸರು ಯಾಕಪ್ಪ ಇಡುತ್ತೀಯ ಎಂದು ಡಿಕೆ ಶಿವಕುಮಾರ್ ನಗುತ್ತಾ ಕೇಳಿದ್ದಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ! ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ "ಶಿವಕುಮಾರ್" ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ಹೃದಯಸ್ಪರ್ಶಿ ಕ್ಷಣ
ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ. ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ, ಈ "ಶಿವಕುಮಾರ" ಕರುನಾಡನ್ನು ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಪುಟ್ಟ ಮಗುವಿಗೆ "ಶಿವಕುಮಾರ್" ಎಂದು ಹೆಸರಿಸುವುದು ಅತ್ಯಂತ ಹೃದಯಸ್ಪರ್ಶಿ ಕ್ಷಣ. ಅವನು ಧೈರ್ಯ, ಮೌಲ್ಯಗಳು ಮತ್ತು ಬದಲಾವಣೆ ತರುವ ಶಕ್ತಿಯೊಂದಿಗೆ ಬೆಳೆಯಲಿ ಎಂದು ಆಶೀರ್ವದಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಂಡಿದ್ದಾರೆ.
ಗಂಡು ಮಗು ಜನಿಸಿದ ಹಿನ್ನೆಲೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತನ್ನ ಪುತ್ರನಿಗೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಇಡಬೇಕು ಎಂದು ಮಹಾದಾಸೆ ಹೊಂದಿದ್ದರು. ಹೀಗಾಗಿ ಅವರು ತಮ್ಮ ಕುಟುಂಬ ಸಮೇತರಾಗಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿ ತಮ್ಮ ಬಯಕೆ ಮುಂದಿಟ್ಟರು. ಇದಕ್ಕೆ ಒಪ್ಪಿದ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿವಾಸದಲ್ಲೇ ಮಗುವಿಗೆ ತಮ್ಮ ಹೆಸರಿಟ್ಟು ಸಂತಸ ಪಟ್ಟಿದ್ದಾರೆ.












Click it and Unblock the Notifications