Priyank Kharge: ಕಲಬುರಗಿಯನ್ನ ಬಿಜೆಪಿಯ ಗೂಂಡಾ ಕೊಂಪೆಯಾಗಲು ಬಿಡಲ್ಲ
ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಅರಾಜಕತೆಯ ಉಸ್ತುವಾರಿಯಲ್ಲಿ ಕಲ್ಬುರ್ಗಿ ಅಕ್ಷರಶ: ನಲುಗುತ್ತಿದೆ ಎಂದು ಬಿಜೆಪಿ ವ್ಯಂಗ್ಯ ಮಾಡಿತ್ತು. ಇದಕ್ಕೆ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಎಂದಿಗೂ ಕಲ್ಯಾಣದ ನಾಡಾಗಿರುತ್ತದೆಯೇ ಹೊರತು ಬಿಜೆಪಿಯ ಗೂಂಡಾಗಿರಿಯ ಕೊಂಪೆಯಾಗಲು ಸಾಧ್ಯವಿಲ್ಲ. ಕಲಬುರಗಿಯ ಜನತೆ ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಅಕ್ಕಿ ಕಳ್ಳತನ, ಗೂಂಡಾಗಿರಿಯಲ್ಲಿ ತೊಡಗಿದವನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುವ ಮೂಲಕ ಕಲಬುರಗಿಯನ್ನು ಮಾಫಿಯಾ ಅಡ್ಡೆಯನ್ನಾಗಿಸುವ ಬಿಜೆಪಿಯವರ ಪ್ರಯತ್ನವು ಯಶಸ್ವಿಯಾಗದಂತೆ ನಾನು ತಡೆಯೊಡ್ಡಿರುವುದು ಬಿಜೆಪಿಗೆ ಮತ್ತು ಬಿಜೆಪಿಯ ಡ್ರಾಮಾ ಸೇನೆಗೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿತ್ತಾಪುರದ ನಿಮ್ಮ ಘನ ಅಭ್ಯರ್ಥಿಯು ರೌಡಿಸಂ, ಗೂಂಡಾಗಿರಿಗೆ ಹೆಸರುವಾಸಿಯಾದವನು ಅಲ್ಲವೇ? ಅಕ್ಕಿ ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿರುವ ನಿಮ್ಮ ಅಭ್ಯರ್ಥಿಯ ಮೇಲೆ ನಿಮ್ಮದೇ ಆಡಳಿತದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವಲ್ಲವೇ? ನಿಮ್ಮ ಮಾಜಿ ಮುಖ್ಯಮಂತ್ರಿಗಳು, ನಿಮ್ಮ ಮಹಾನ್ ನಾಯಕರುಗಳು ಇದೇ ಅಕ್ಕಿ ಕಳ್ಳನ ಪರ ಚುನಾವಣಾ ಪ್ರಚಾರ ಮಾಡಿದ್ದರಲ್ಲವೇ? ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಬಡವರ ಅಕ್ಕಿಯನ್ನಷ್ಟೇ ಅಲ್ಲ, ಅಂಗನವಾಡಿ ಮಕ್ಕಳ ಪಾಲಿನ ಪೌಷ್ಟಿಕ ಆಹಾರವನ್ನೂ ದೋಚಿರುವ ನಿಮ್ಮ ಘನ ಅಭ್ಯರ್ಥಿ ಇತ್ತೀಚಿಗೆ ಎರಡು ತಿಂಗಳು ಜೈಲಿಗೆ ಹೋಗಿ ಬಂದಿದ್ದಾನಲ್ಲವೇ? ರೈತರಿಗೆ ವಂಚಿಸಿದ ಪ್ರಕರಣದಲ್ಲಿ ನಿಮ್ಮ ಮಾಜಿ ಶಾಸಕರ ಮೇಲೆ ಸಿಬಿಐ ಪ್ರಕರಣ ದಾಖಲಿಸಿದ್ದನ್ನು ಮರೆತಿದ್ದೀರಾ? ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಯ ರೂವಾರಿಗಳು ಯಾರು ಎಂಬ ಪ್ರಶ್ನೆಗೆ ನಿಮ್ಮದೇ ಪಕ್ಷದ ಶಾಸಕನ ಬಳಿ ಉತ್ತರ ಕೇಳಿ ನೋಡಿ ಎಂದು ಕಿಡಿಕಾರಿದ್ದಾರೆ.

ಪೊಲೀಸ್ ಪೇದೆಯ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿದ ಅಕ್ರಮ ಮರಳು ದಂಧೆಕೋರ ಬಿಜೆಪಿ ಕಾರ್ಯಕರ್ತ ಎಂಬ ಸತ್ಯವನ್ನು ಬಿಜೆಪಿ ಮರೆತಿದೆಯೇ ಅಥವಾ ಮರೆಸಲು ಪ್ರಯತ್ನಿಸುತ್ತಿದೆಯೇ? ನಕಲಿ ಸ್ವಾಮಿಯೊಬ್ಬನನ್ನು ಮುಂದಿಟ್ಟುಕೊಂಡು ಕಲಬುರಗಿಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ದುರಾವಸ್ಥೆಗೆ ತಲುಪಿರುವ ಬಿಜೆಪಿ ಆರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುವ ಪ್ರಯತ್ನದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಉತ್ತರ ನೀಡಿದ್ದಾರೆ.
ದಲಿತರು ಎಂದರೆ ಕಾಂಗ್ರೆಸ್ ಕಸಕ್ಕಿಂತಲೂ ಕೀಳಾಗಿ ನೋಡುತ್ತಲೇ ಇದೆ. ವೋಟ್ ಬ್ಯಾಂಕಿಗಾಗಿ ದಲಿತರನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಸದಾಕಾಲವೂ ತುಳಿಯುತ್ತಿದೆ. ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರವರೆಗೂ ಅವಮಾನ ಮಾಡುತ್ತಲೇ ಇದೆ ಎಂದು ಬಿಜೆಪಿ ನಿನ್ನೆ ಆರೋಪಿಸಿತ್ತು. ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನಡೆಯನ್ನು ಆ ದಿನಗಳ ಡಿ.ಕೆ.ಶಿವಕುಮಾರ್ ಅವರು ಅನುಸರಿಸುತ್ತಿದ್ದಾರೆ ಎಂದು ದೂರಿತ್ತು.












Click it and Unblock the Notifications