ಮುನಿರತ್ನ ಕೃತ್ಯಕ್ಕೆ ಈ ಇಬ್ಬರೇ ಸಾಥ್: ಸಚಿವ ಕೃಷ್ಣಬೈರೇಗೌಡ ಹೇಳಿದ್ದು ಯಾರ ಬಗ್ಗೆ?
ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನದ ವಿಚಾರವು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಮುನಿರತ್ನ ಅವರ ದುಷ್ಕೃತ್ಯವನ್ನು ಖಂಡಿಸದೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಸುಮ್ಮನೆಯೇ ಇದ್ದಾರೆ. ಹಾಗಾದರೆ, ಇವರ ಕುಮ್ಮಕ್ಕಿಲ್ಲದೆ ಇಷ್ಟೆಲ್ಲ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಶಾಸಕ ಮುನಿರತ್ನ ಮಾಡಿದ್ದು ತಪ್ಪು ಎಂದು ಇವರು ಈವರೆಗೆ ಎಲ್ಲಿಯೂ ಮಾತನಾಡಲಿಲ್ಲ. ಮುನಿರತ್ನ ಭ್ರಷ್ಟಾಚಾರದ ವ್ಯಕ್ತಿ. ಅವರು ಮನೆಯಲ್ಲಿಯೇ ಬಿಬಿಎಂಪಿ ಬಿಲ್ ಬರೆಯುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಅವರು ಹನಿಟ್ರ್ಯಾಪ್ ನಡೆಸುತ್ತಾರೆ ಎನ್ನುವ ಆಘಾತಕಾರಿ ವಿಷಯ ಕಿವಿಗೆ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಏಡ್ಸ್ ರೋಗ ಇರುವವರನ್ನೇ ಬಳಸಿಕೊಂಡಿದ್ದಾರಂತೆ. ಈ ಬಗ್ಗೆ ಸ್ವತಃ ತಮ್ಮದೇ ಬಿಜೆಪಿ ಪಕ್ಷದ ಕಾರ್ಯಕರ್ತೆಯೇ ದೂರು ಕೊಟ್ಟಿದ್ದಾರೆ. ಇಷ್ಟೆಲ್ಲ ವಿಚಾರ ಹೊರಬಂದರೂ ಬಿಜೆಪಿಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಅವರು ನಮ್ಮ ಕಾಂಗ್ರೆಸ್‌ನಲ್ಲಿ ಇದ್ದ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಿದ್ದರೆ ಕೇಳಬೇಕಾಗಿತ್ತು. ಆದರೆ, ಬಿಜೆಪಿಯಲ್ಲಿ ಮುನಿರತ್ನ ಇದ್ದಾಗ ಕೇಳಬಾರದು ಎನ್ನುವ ಆರ್.ಅಶೋಕ್ ಅವರ ಮನಸ್ಥಿತಿ ಒಳ್ಳೆಯದಲ್ಲ. ಅಶೋಕ್ ಮತ್ತು ಹೆಚ್.ಡಿ. ಕುಮಾರಸ್ವಾಮಿಗೆ ಮನುಷ್ಯತ್ವ ಅನ್ನೋದು ಇದ್ಯಾ? ಎಂದು ಗರಂ ಆಗಿದ್ದಾರೆ.

ಇಲ್ಲಿ ನೂರಕ್ಕೆ ನೂರರಷ್ಟು ಯಾರೂ ಸಾಚಾ ಅಲ್ಲ. ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತಾರೆ. ಆದರೆ ಮುನಿರತ್ನ ಮಾಡಿರುವುದು ಸರಿಯೇ ಎಂಬುದನ್ನು ಅವರು ಯೋಚಿಸಬೇಕು. ಮುನಿರತ್ನ ಮಾಡಿರುವ ಕೃತ್ಯಗಳು ಇಷ್ಟೆಲ್ಲ ಹೊರ ಬಂದಿದ್ದರೂ, ಅವರಿಗೆ ಬೆಂಬಲವಾಗಿ ನಿಂತವರೂ ಸಹ ಅಪರಾಧದ ಭಾಗ ಎಂದು ಆರೋಪಿಸಿದ್ದಾರೆ.
ಮುನಿರತ್ನ ಅವರು ಒಕ್ಕಲಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕೇಸ್ ಅನ್ನು ಎಸ್ಐಟಿ ತನಿಖೆಗೆ ನೀಡುವಂತೆ ನಾನು ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಮೇಲೆ ದಾಳಿ ನಡೆದಾಗ ಎಚ್ಚೆತ್ತುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಅದನ್ನು ಖಂಡಿಸಬೇಕು ಎಂದಿದ್ದಾರೆ.

ಒಕ್ಕಲಿಗ ಸಮುದಾಯವು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹೆಚ್ಚಿನ ಗೌರವ ನೀಡುತ್ತದೆ. ಮುನಿರತ್ನ ಅವರ ಕೇಸ್ ಸಂಬಂಧ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಂದು ಖಂಡನಾ ನಿರ್ಣಯ ಸಭೆ ಆಗಬೇಕೆಂದು ಒಕ್ಕಲಿಗೆ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಸ್ವಾಮೀಜಿಯವರ ತೀರ್ಮಾನವೇ ಅಂತಿಮ. ಹಿಂದಿನಿಂದಲೂ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಗೌರವದಿಂದ ಜೀವನ ನಡೆಸಿಕೊಂಡು ಬಂದಿದೆ. ಈ ರೀತಿ ಸುಖಾಸುಮ್ಮನೆ ನಮ್ಮ ಸಮುದಾಯದ ಅವಹೇಳನ ಮಾಡಿದರೆ, ಒಕ್ಕಲಿಗರ ಗೌರವಕ್ಕೆ ಧಕ್ಕೆ ಬಂದಂತೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಮುನಿರತ್ನ ಅವರು ಒಕ್ಕಲಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಒಕ್ಕಲಿಗ ಸಮುದಾಯದ ನಾಯಕರು, ಶಾಸಕರು, ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದ್ದಾರೆ.












Click it and Unblock the Notifications