Honeytrap Case: ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ: ಹೊಸ ಟ್ವಿಸ್ಟ್ ಕೊಟ್ಟ ಸಚಿವ ರಾಜಣ್ಣ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹನಿಟ್ರ್ಯಾಪ್ ವಿಚಾರವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಕೆಎನ್ ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ವಿಚಾರ ಬಹಿರಂಗಪಡಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಒಂದು ವಾರದಿಂದಲೂ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಿದೆ. ರಾಜಣ್ಣ ಅವರು ದಿನಕ್ಕೊಂದು ಟ್ವಿಸ್ಟ್ ಕೊಡುತ್ತಾ ಹನಿಟ್ರ್ಯಾಪ್ ವಿಚಾರವನ್ನು ಬಿಚ್ಚಿಡುತ್ತಿದ್ದಾರೆ. ಎರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು ಎಂದಿದ್ದ ಅವರು ಆ ಯುವತಿಯರು ಯಾರು ಎಂಬ ಬಗ್ಗೆ ಸ್ಫೋಟಕ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಇದೀಗ ಇದರಲ್ಲಿ ನನ್ನದೂ ತಪ್ಪಿದೆ ಎನ್ನುವ ಮೂಲಕ ಸಚಿವ ಕೆಎನ್ ರಾಜಣ್ಣ ಸಂಚಲನ ಸೃಷ್ಟಿಸಿದ್ದಾರೆ.
ಹನಿಟ್ರ್ಯಾಪ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜಣ್ಣ ಅವರು ಒಬ್ಬ ಹುಡುಗ ನನ್ನ ಭೇಟಿಯಾಗಲು ಎರಡು ಬಾರಿ ಬಂದಿದ್ದ, ಮತ್ತೊಂದು ಹುಡುಗಿ ಎರಡು ಬಾರಿ ಬಂದಿದ್ದಳು. ಆಕೆ ಬ್ಲೂ ಜೀನ್ಸ್ ಹಾಕಿದ್ದಳು, ಮೊದಲ ಭೇಟಿ ವೇಳೆ ಅವರು ಯಾರು ಏನೆಂದು ಹೇಳಲಿಲ್ಲ. ಆದರೆ ನಿಮ್ಮ ಹತ್ತಿರ ಪರ್ಸನಲ್ ಆಗಿ ಸೀಕ್ರೇಟ್ ಆಗಿ ಮಾತನಾಡಬೇಕು ಸರ್ ಎಂದಿದ್ದಳು. ಎರಡನೇ ಸಲ ಆಕೆ ಬಂದಾಗ ನಾನು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದಳು ಎಂದು ರಾಜಣ್ಣ ಕೊನೆಗೂ ಬಹಿರಂಗಪಡಿಸಿದ್ದಾರೆ.

ಈ ವಿಚಾರ ಪ್ರಸ್ತಾಪಿಸಿದ ಸಚಿವ ಕೆಎನ್ ರಾಜಣ್ಣ ಅವರು ಕೊನೆಗೆ ಇದರಲ್ಲಿ ನನ್ನದೂ ತಪ್ಪಿದೆ ಅನಿಸುತ್ತೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಸಿಸಿಟಿವಿ ಇದೆ. ಆದರೆ, ಈ ಸರ್ಕಾರದಲ್ಲಿ ಅದೇನು ಕಥೇನೋ, ಯಾರೂ ಮನೆಗಳಿಗೆ ಸಿಸಿಟಿವಿ ಕ್ಯಾಮರಾ ಹಾಕಿಸಿಲ್ಲ. ಈ ಪ್ರಕರಣ ಹೊರಬಂದ ನಂತರವೇ ನಾನು ಕೂಡ ಸಿಸಿಟಿವಿ ಬಗ್ಗೆ ಪರಿಶೀಲಿಸಿದೆ. ಆದರೆ ಸರ್ಕಾರಿ ನಿವಾಸಗಳಿಗೆ ಸಿಸಿಟಿವಿ ಹಾಕಲ್ಲ ಎಂದು ಹೇಳಿದ್ರು ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರವೂ ಹೊರಹಾಕಿದ್ದಾರೆ ರಾಜಣ್ಣ.
ಬೆಂಗಳೂರಿನಲ್ಲಿರುವ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ, ಹಾಗಾಗಿ ಯಾವುದೇ ವಿಡಿಯೋ ರೆಕಾರ್ಡ್ ಆಗಿಲ್ಲ, ಈ ವಿಚಾರ ಗೊತ್ತಾದ ನಂತರ ನಾನು ಮನೆಗೆ ಯಾರು ಬಂದಿದ್ದರು ಎಂದು ಪರಿಶೀಲಿಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ಫೋಟೋ ತೋರಿಸಿದರೆ ಅವರನ್ನು ಗುರುತು ಹಿಡಿಯುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.

ನಾನು ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಹೇಳಿಲ್ಲ. ಎಲ್ಲ ಪಕ್ಷದ ರಾಜಕಾರಣಿಗಳ ಮೇಲೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದು ಮಾತ್ರ ಹೇಳಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಇನ್ನು ನನಗೆ ಸಮಯ ಸಿಗದ ಕಾರಣ ದೂರು ನೀಡಿರಲಿಲ್ಲ. ಈಗ ಮೂರು ಪೇಜ್‌ಗಳ ದೂರು ಸಿದ್ಧಪಡಿಸಿದ್ದೇನೆ. ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ದೂರು ಕೊಡುತ್ತೇನೆ. ಎಫ್‌ಐಆರ್ ದಾಖಲಾದ ನಂತರ ಹನಿಟ್ರ್ಯಾಪ್ ತನಿಖೆ ನಡೆಯಲಿದೆ ಎಂದು ರಾಜಣ್ಣ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಇದೀಗ ರಾಜಕೀಯ ನಾಯಕರ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ.












Click it and Unblock the Notifications