ಆರ್. ಧ್ರುವನಾರಾಯಣ ನಿಧನ: ಕೆಪಿಸಿಸಿ ಕಚೇರಿಯಲ್ಲಿ ಸಂತಾಪ ಸಭೆ; ಭಾವುಕರಾದ ಕಾಂಗ್ರೆಸ್ ನಾಯಕರು
ಬೆಂಗಳೂರು,ಮಾರ್ಚ್ 11: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನರಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮತ್ತಿತರು ಸಂತಾಪ ಸಭೆ ನಡೆಸಿದರು.
ಸಂತಾಪ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರ್. ಧ್ರುವನಾರಾಯಣ ಸಾವು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಘಾತ ಉಂಟು ಮಾಡಿದ ದಿನ. ಭಗವಂತ ಏಕೆ ಕ್ರೂರಿ ಇದ್ದಾನೆ ಎಂದು ಅರ್ಥ ಆಗ್ತಿಲ್ಲ. ಅಜಾತಶತ್ರು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧ್ರವತಾರೆಯಾಗಿದ್ದರು. 'ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಡಿ ಕೆ ಶಿವಕುಮಾರ್ ಭಾವುಕರಾದರು.

ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಬಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಹೇಳಿದರು.
ಪಕ್ಷ ಕೊಟ್ಟ ಜವಾಬ್ದಾರಿ ಚಾಚು ತಪ್ಪದೆ ಮಾಡುತ್ತಿದ್ದರು. ಶ್ರದ್ದಾಪೂರ್ವಕವಾಗಿ ಕೆಲಸ ಮಾಡುತ್ತಾ ಬಂದವರು. ಆರ್ ಧ್ರುವನಾರಾಯಣ ಸಾವು ನಂಬುವುದಕ್ಕೆ ಆಗುತ್ತಿಲ್ಲ. ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಸಿ ವೇಣುಗೋಪಾಲ ಕೂಡಾ ಬರ್ತಾರೆ. ಮೃತ ದೇಹವನ್ನ ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಭಾನುವಾರ ಮಧ್ಯಾಹ್ಮ ಅಂತಿಮ ಯಾತ್ರೆ ನಡೆಯಲಿದೆ. ಇನ್ನೂ ಭಾನುವಾರ ಧ್ರುವ ನಾರಾಯಣ ಅವರ ಹುಟ್ಟೂರಿನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಇನ್ನೂ ಈ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಧ್ರುವ ನಾರಾಯಣ ಅವರು ನಗು ಮುಖದಲ್ಲಿ ಎಲ್ಲರ ಮಾತನ್ನು ಆಲಿಸುತ್ತಿದ್ದರು. ಇಂತಹ ಸ್ಥಿತಿ ಎದುರಾಗುತ್ತದೆ ಅಂದುಕೊಂಡಿರಲಿಲ್ಲ. ಬಡವರು, ಶೋಷಿತರ ಬಗ್ಗೆ ಕಾಳಜಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಸೋನಿಯಾ ರಾಹುಲ್ ಖರ್ಗೆ ಮೆಚ್ಚುಗೆಗೆ ಪಾತ್ರರಾಗಿದ್ದವರು. ಸಾಧಾರಣ ಕಾಂಗ್ರೆಸ್ ಕಾರ್ಯಕರ್ತನಾಗಿ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ಆಗಿದ್ದರು. ಆರ್. ಧ್ರುವನಾರಾಯಣ ಕ್ರಿಯಾಶೀಲ ರಾಜಕಾರಣಿಯಾಗಿದ್ದವರು. ಸಂಸದರಾಗಿದ್ದಾಗ ರಾಜ್ಯದ ಹಿತ ಕಾಪಾಡಲು ಹೋರಾಟ ಮಾಡಿದವರು. ಅವರು ಸಾವನ್ನಪ್ಪುತ್ತಾರೆ ಎಂದು ಯಾರೂ ಊಹೆ ಮಾಡಿಲ್ಲ ಎಂದರು.
ಇನ್ನೂ ಕೆಪಿಸಿಸಿ ಕಚೇರಿಯಲ್ಲಿ ಧ್ರುವ ನಾರಾಯಣ ಸಂತಾಪ ಸಭೆಯಲ್ಲಿ ಕಾಂಗ್ರೆಸ್ ನ ಹಲವು ನಾಯಕರು ಧ್ರುವ ನಾರಾಯಣ ಅವರ ಕಾರ್ಯವೈಖರಿ ನಮಗೆಲ್ಲಾ ಮಾದರಿ. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ ಎಂದು ಸಂತಾಪ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್ ನಾಯಕರು ಭಾವುಕರಗಿದ್ದಾರೆ.












Click it and Unblock the Notifications