ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಕತ್ತರಿಯಲ್ಲಿ ಸಿಲುಕಿದ ರಾಜ್ಯ 'ಕೈ' ನಾಯಕರು, ಮುಂದೇನು?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ನವೆಂಬರ್ 10; ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ 'ಹಿಂದೂ' ಪದದ ಅರ್ಥದ ಬಗೆಗೆ ನೀಡಿದ ಹೇಳಿಕೆ ಬರಗಾಲದಲ್ಲಿ ಸಿಕ್ಕ ಮೃಷ್ಟಾನ್ನ ಭೋಜನವಾಗಿದೆ. ಹೀಗಾಗಿ ಅದನ್ನು ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲಿ ಅದನ್ನು ಕಾಂಗ್ರೆಸ್ ವಿರುದ್ಧ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಸತೀಶ್ ಜಾರಕಿಹೊಳಿ ಹೇಳಿಕೆ ಕರ್ನಾಟಕ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅದನ್ನು ಬಿಜೆಪಿ ಚುನಾವಣಾ ಅಸ್ತ್ರವಾಗಿ ಮುಂದಿನ ವಿಧಾನಸಭಾ ಚುನಾವಣೆ ತನಕವೂ ಜೀವಂತವಾಗಿಟ್ಟುಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸಲೂ ಆಗದೆ ಸಮರ್ಥಿಸಲೂ ಆಗದೆ ಒದ್ದಾಡುವಂತಾಗಿದೆ.

ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತ ಪರ ಮತ್ತು ಹಿಂದೂ ವಿರೋಧಿ ಎಂದೇ ಬಿಂಬಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ನಾಯಕರು ಕೂಡ ಆಗಾಗ್ಗೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಹಿಂದೂ ವಿರೋಧಿ ಧೋರಣೆಗಳು ಕಾರಣವಾಗಿದೆ.

ಕೇವಲ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ವಿರುದ್ಧ ಮಾತನಾಡುವ ಭರದಲ್ಲಿ ಕಾಂಗ್ರೆಸ್ ನಾಯಕರು ಮಾಡಿಕೊಳ್ಳುವ ಎಡವಟ್ಟುಗಳು ಇಡೀ ಹಿಂದೂ ಸಮೂಹದ ಮೇಲೆ ಪರಿಣಾಮ ಬೀರುವಂತಿರುತ್ತದೆ. ಓಲೈಕೆ ರಾಜಕಾರಣಕ್ಕಿಳಿದರೆ ಇಂತಹ ಎಡವಟ್ಟುಗಳು ಆಗುತ್ತಲೇ ಇರುತ್ತದೆ. ಆದರೆ ನಾಯಕರು ಕೆಲವೊಂದು ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಮೇಲಿಂದ ಮೇಲೆ ತಪ್ಪುಗಳನ್ನು ಮಾಡುತ್ತಲೇ ಇರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

ಕಾಂಗ್ರೆಸ್‌ನ ಉತ್ಸಾಹಕ್ಕೆ ತಣ್ಣೀರು

ಕಾಂಗ್ರೆಸ್‌ನ ಉತ್ಸಾಹಕ್ಕೆ ತಣ್ಣೀರು

ಚುನಾವಣೆಗೆ ಕೇವಲ ಆರು ತಿಂಗಳಷ್ಟೆ ಬಾಕಿಯಿರುವಾಗ ರಾಜ್ಯದಲ್ಲಿ ಜೋಡೋ ಯಾತ್ರೆ ಮಾಡುವ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ವೇಗ ನೀಡಿದ್ದರು. ಭಿನ್ನಾಭಿಪ್ರಾಯ ಹೊಂದಿದ್ದ ಒಂದಷ್ಟು ನಾಯಕರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಮಠ, ದೇಗುಲಗಳಿಗೆ ಭೇಟಿ ನೀಡಿದರು. ಆ ಮೂಲಕ ಹಿಂದೂಗಳ ಮನಸೆಳೆಯುವ ಪ್ರಯತ್ನ ಮಾಡಿದರು. ಸರ್ಕಾರದ ವಿರುದ‍್ಧ ವಾಗ್ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿ ಮಾಡಿ ಹೋದರು. ಅದೇ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ಗೆ ಈಗ ಗರಬಡಿದಂತಾಗಿದೆ.

ಸವಾಲುಗಳನ್ನು ಎದುರಿಸಿದ್ದ ಕೈಪಡೆ

ಸವಾಲುಗಳನ್ನು ಎದುರಿಸಿದ್ದ ಕೈಪಡೆ

ಹಾಗೆ ನೋಡಿದರೆ ಕಳೆದ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಬಿಜೆಪಿ ನೀಡಿದ ಹೊಡೆತ ಭಯಾನಕವಾಗಿತ್ತು. ಮೊದಲೇ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ನಿಂದ ಆಪರೇಷನ್ ಕಮಲದ ಮೂಲಕ ಘಟಾನುಘಟಿ ಶಾಸಕರನ್ನು ಕರೆತರುವ ಮೂಲಕ ದೊಡ್ಡದೊಂದು ಶಾಕ್ ನೀಡಿದ್ದರು. ಅದರಿಂದ ಚೇತರಿಸಿಕೊಳ್ಳುವುದೇ ಕಾಂಗ್ರೆಸ್‌ಗೆ ಕಷ್ಟವಾಗಿತ್ತು. ಇದಾಗ ಬಳಿಕ ಜೆಡಿಎಸ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿತು. ಅದಾದ ನಂತರ ಕೊರೊನಾ ಕಾಣಿಸಿಕೊಂಡಿದ್ದರಿಂದ ಪಕ್ಷದ ಸಂಘಟನೆ ಮಾಡುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿತು.

ಮೇಕೆದಾಟು ಪಾದಯಾತ್ರೆಯಲ್ಲಿ ಯಶಸ್ಸು

ಮೇಕೆದಾಟು ಪಾದಯಾತ್ರೆಯಲ್ಲಿ ಯಶಸ್ಸು

ಕೊರೊನಾ ಕಡಿಮೆಯಾಗುತ್ತಿದ್ದಂತೆಯೇ ಪಕ್ಷದ ನಾಯಕರನ್ನು ಒಂದುಗೂಡಿಸುವ ಮತ್ತು ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದರು. ಈ ಪಾದಯಾತ್ರೆ ಕುರಿತಂತೆ ಹಲವು ರೀತಿಯ ಟೀಕೆ ಟಿಪ್ಪಣಿಗಳು ಬಂದರೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಕೊರೊನಾ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾದರೂ ಜಗ್ಗಲಿಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಹೆಚ್ಚಾಗುತ್ತಿದ್ದಂತೆಯೇ ಕೆಲಕಾಲ ಸ್ಥಗಿತಗೊಳಿಸಿ ಮತ್ತೆ ಆರಂಭಿಸಲಾಯಿತು. ಈ ವಿಚಾರದಲ್ಲಿ ಕಾಂಗ್ರೆಸ್ ತಕ್ಕಮಟ್ಟಿಗೆ ಯಶಸ್ಸು ಕಂಡಿತು.

ಸರ್ಕಾರದ ವಿರುದ್ಧ ತೀವ್ರ ಹೋರಾಟ

ಸರ್ಕಾರದ ವಿರುದ್ಧ ತೀವ್ರ ಹೋರಾಟ

ಇದಾದ ಬಳಿಕ ಇತ್ತೀಚೆಗೆ ಸರ್ಕಾರದ ವಿರುದ್ಧದ ನಲುವತ್ತು ಪರ್ಸೆಂಟ್ ಕಮೀಷನ್ ಆರೋಪ ಕಾಂಗ್ರೆಸ್ ಗೆ ವರದಾನವಾಗಿ ಪರಿಣಮಿಸಿತು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ ಕಾಂಗ್ರೆಸ್ ಸಚಿವ ಕೆ. ಎಸ್. ಈಶ್ವರಪ್ಪ ಅವರ ತಲೆದಂಡ ಪಡೆಯುವಲ್ಲಿಯೂ ಯಶಸ್ವಿಯಾಯಿತು. ರಾಹುಲ್ ಗಾಂಧಿ ರಾಜ್ಯದಲ್ಲಿ ಯಾತ್ರೆ ನಡೆಸಿದ ಬಳಿಕ ಜಿಗಿತುಕೊಂಡ ಕಾಂಗ್ರೆಸ್ ಪೇ ಸಿಎಂ, ಸೇ ಸಿಎಂ ಅಭಿಯಾನಗಳ ಮೂಲಕ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಮುಜುಗರಪಡುವಂತೆ ಮಾಡಿತು.

ಕಾಂಗ್ರೆಸ್ ಹೋರಾಟ, ಅಭಿಯಾನ ನಡೆಸುತ್ತಿದ್ದಂತೆಯೇ ಬಿಜೆಪಿ ಎಚ್ಚೆತ್ತುಕೊಂಡಿತು. ಕಾಂಗ್ರೆಸ್ ನಾಯಕರ ಆರೋಪಗಳಿಗೆ ಉತ್ತರ ನೀಡಲು ಬಿಜೆಪಿ ನಾಯಕರು ರಾಜ್ಯ ಪ್ರವಾಸ ಆರಂಭಿಸಿದ್ದರು. ಬಿಜೆಪಿ ಸಂಕಲ್ಪ ಯಾತ್ರೆ ಶುರುವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಂಕಲ್ಪ ಯಾತ್ರೆ ನಡೆಸಲಾರಂಭಿಸಿದ್ದರು. ಈ ಯಾತ್ರೆ ಪ್ರಗತಿಯಲ್ಲಿರುವಾಗಲೇ ಯಾತ್ರೆಗೆ ಬೇಕಾಗಿದ್ದ ಬಹುಮುಖ್ಯವಾದ ಆಹಾರವನ್ನೇ ಸತೀಶ್ ಜಾರಕಿಹೊಳಿ ನೀಡಿದ್ದಾರೆ. ಈ ವಿಚಾರವನ್ನಿಟ್ಟುಕೊಂಡು ಮುಂದಿನ ರಾಜಕೀಯವನ್ನು ಬಿಜೆಪಿ ಮಾಡಲಿದೆ.

ಕಾಂಗ್ರೆಸ್ ಹೇಗೆ ಎದುರಿಸಲಿದೆ?

ಕಾಂಗ್ರೆಸ್ ಹೇಗೆ ಎದುರಿಸಲಿದೆ?

ರಾಜ್ಯದಲ್ಲಿ ಸರ್ಕಾರದ ವಿರುದ್ಧ ಅರ್ಥಾತ್ ಬಿಜೆಪಿ ವಿರುದ್ಧ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್‌ನ ಹೋರಾಟ, ಅಭಿಯಾನ ಎಲ್ಲವೂ ಇದೀಗ ನೀರಿನಲ್ಲಿ ಮಾಡಿದ ಹೋಮವಾಗಿದೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡಿದ್ದರೆ. ಬಿಜೆಪಿಗೊಂದು ಟಾನಿಕ್‌ನಂತೆ ಗೋಚರಿಸಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಇನ್ನು ಏನೆಲ್ಲ ಬೆಳವಣಿಗೆಗಳು ಆಗಲಿವೆಯೋ? ಎಂಬುದನ್ನು ಕಾದು ನೋಡಬೇಕಿದೆ.

English summary
Karnataka Congress leaders in trouble after Yamakanmardi Congress MLA and KPCC working president Satish Jarkiholi comment on Hindu word.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X