Lok Sabha Election 2024: ಅತಿ ಹೆಚ್ಚು ಲೋಕ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು !
ಬೆಂಗಳೂರು, ಮೇ 10: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಸದ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಈ ನಡುವೆ ಮೈತ್ರಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿ ನಾವೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಆದರೆ ಯಾರು ಗೆಲ್ಲುತ್ತಾರೆ? ಯಾರತ್ತ ಮತದಾರರು ಒಲವು ತೋರಿದ್ದಾರೆ? ಎಂಬುದು ತಿಳಿಯಲು ಫಲಿತಾಂಶ ಬರಬೇಕಾಗಿದೆ. ಆದರೂ ಗೆಲುವು ನಮ್ಮದೇ ಎಂಬ ವಿಶ್ವಾಸ ಕೈ ನಾಯಕರಲ್ಲಿ ಹೆಚ್ಚಾಗಿರುವುದು ಕಾಣಿಸುತ್ತಿದೆ.
ಇವತ್ತು ರಾಜಕೀಯವಾಗಿ ನಾಯಕರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿದರೂ ಕೂಡ ಅಂತಿಮವಾಗಿ ನಿರ್ಧಾರ ಮಾಡುವವರು ಮತ್ತು ಈಗಾಗಲೇ ಮಾಡಿರುವವರು ಮತದಾರರೇ.. ಆದರೂ ರಾಜಕೀಯ ಲೆಕ್ಕಾಚಾರಗಳ ಮೂಲಕ ಅವರವರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯದಲ್ಲಿ ಎಲ್ಲವೂ ಅಂದು ಕೊಂಡಂತೆ ಆಗುತ್ತೆ ಎನ್ನುವುದೇ ಸುಳ್ಳು. ಅದಕ್ಕಿಂತ ಹೆಚ್ಚಾಗಿ ಸಮಾವೇಶಗಳಲ್ಲಿ ಭಾಗವಹಿಸುವವರೆಲ್ಲರೂ ಮತ ಹಾಕುತ್ತಾರೆ ಎನ್ನುವುದು ಕೂಡ ಭ್ರಮೆಯೇ.

ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡವಾರು ಮತದಾನ ಹೆಚ್ಚಾಗಿದೆ. ಜತೆಗೆ ಯುವ ಮತದಾರರು ಎಂಟ್ರಿ ಕೊಟ್ಟಿದ್ದಾರೆ. ಕಳೆದ 2019ರ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವ ಕಾರಣ ಇದರ ಲಾಭ ಯಾರಿಗೆ ಆಗಲಿದೆ ಎನ್ನುವುದೇ ಈಗಿರುವ ಕುತೂಹಲವಾಗಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಮತದಾರರ ಮನೆ ಮನೆಗೆ ತಲುಪಿಸಿದ್ದೇವೆ. ಹೀಗಾಗಿ ಮತದಾರರು ನಮ್ಮತ್ತ ಒಲವು ತೋರಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ವಿಶ್ವಾಸವಾಗಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತವನ್ನು ನೋಡಿ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎನ್ನುವುದು ಬಿಜೆಪಿ ನಾಯಕರ ಅಚಲ ನಂಬಿಕೆಯಾಗಿದೆ.
ಖುಷಿಯಲ್ಲಿರುವ ರಾಜ್ಯ ಕಾಂಗ್ರೆಸ್ಸಿಗರು
ಯುವ ಸಮುದಾಯ ನರೇಂದ್ರಮೋದಿಯ ಅಬಿವೃದ್ಧಿ ಕಾರ್ಯಗಳನ್ನು ಬೆಂಬಲಿಸುತ್ತಿರುವುದರಿಂದ ಮತ್ತು ಐನೂರು ವರ್ಷಗಳ ಹಿಂದೂಗಳ ಕನಸಾದ ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸುವ ಮೂಲಕ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆರ್ಟಿಕಲ್ 370ನ್ನು ಕಾಶ್ಮೀರದಿಂದ ತೆಗೆದು ಹಾಕಿದ್ದಲ್ಲದೆ, ಭಯೋತ್ಪಾದಕರ ಹುಟ್ಟಡಗಿಸಿದ್ದಾರೆ. ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಗೆಲುವು ನಮ್ಮದೇ ಎನ್ನುವುದು ಬಿಜೆಪಿ ರಾಜ್ಯ ನಾಯಕರ ನಂಬಿಕೆಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ತುಂಬಾ ಖುಷಿಯಲ್ಲಿದ್ದಾರೆ. ಅವರಿಗೆ ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ನಮ್ಮ ಕೈಹಿಡಿದಿದೆ. ಹೀಗಾಗಿ ನಾವು ಎರಡಂಕಿಯ ಸ್ಥಾನವನ್ನು ಪಡೆದುಕೊಳ್ಳುತ್ತೇವೆ. ಆ ಮೂಲಕ ದೆಹಲಿಗೆ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಕಳುಹಿಸಿಕೊಟ್ಟ ಗೌರವಕ್ಕೆ ಪಾತ್ರರಾಗುತ್ತೇವೆಂಬ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯನ್ನು ಜನಕ್ಕೆ ನೀಡಿಯಾಗಿದೆ. ಅದರ ಫಲಾಫಲಗಳನ್ನು ಜನರು ಪಡೆಯುತ್ತಿದ್ದಾರೆ. ಇದರ ನಡುವೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಕೂಡ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.

ಕಾಂಗ್ರೆಸ್ ಎಷ್ಟೇ ಸ್ಥಾನ ಗೆದ್ದರೂ ಸಾಧನೆಯೇ
ರಾಜ್ಯ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿದೆ ಹೀಗಾಗಿ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ನಂಬಿಕೆ ಬಂದಿರುವ ಕಾರಣ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ನಮ್ಮನ್ನು ಹೆಚ್ಚಿನ ಸ್ಥಾ ನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಆವರಿಸಿದೆ. ಹೀಗಾಗಿ ಕಾಂಗ್ರೆಸ್ ನ ನಾಯಕರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದು ಕೇವಲ ಒಂದು ಸ್ಥಾನ ಮಾತ್ರ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಮೋದಿ ಅಲೆಯೂ ಇಲ್ಲ, ಗ್ಯಾರಂಟಿಯೂ ಇಲ್ಲ. ಇಲ್ಲಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಲೆ ಹೀಗಾಗಿ ಗೆಲುವುವ ನಮ್ಮದೇ ಎಂಬ ಲೆಕ್ಕಾಚಾರ ಕೈ ನಾಯಕರದ್ದಾಗಿದೆ. ಇಲ್ಲಿ ಕಾಂಗ್ರೆಸ್ ಎಷ್ಟೇ ಸ್ಥಾನಗಳನ್ನು ಗೆದ್ದರೂ ಅದು ಸಾಧನೆಯೇ... ಆದರೆ ಬಿಜೆಪಿ ಈಗಾಗಲೇ ಉತ್ತುಂಗ ಸ್ಥಿತಿಯಲ್ಲಿದ್ದು, ಇಲ್ಲಿ ಒಂದು ಸ್ಥಾನ ಕಡಿಮೆಯಾದರೂ ಅದು ಮೋದಿ ಆಟ ರಾಜ್ಯದಲ್ಲಿ ನಡೆದಿಲ್ಲ ಎಂಬ ಸಂದೇಶವನ್ನು ನೀಡುತ್ತದೆ.
ಹೆಚ್ಚು ಫೋಕಸ್ ಆಗಿದ್ದು ಸಿದ್ದು, ಡಿಕೆಶಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಆದರೆ ಫಲಿತಾಂಶ ಬಂದಾಗ ಲೆಕ್ಕಾಚಾರ ಬುಡಮೇಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿದ್ದ ಪರಿಸ್ಥಿತಿ ಈ ಬಾರಿ ಇರಲಿಲ್ಲ. ಜತೆಗೆ ಕಾಂಗ್ರೆಸ್ ಕೇಂದ್ರದ ನಾಯಕರಿಗಿಂತ ಹೆಚ್ಚಾಗಿ ರಾಜ್ಯದ ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಹೆಚ್ಚು ಹೆಚ್ಚು ಪ್ರದರ್ಶಿಸಿ ಮತ ಕೇಳಿದ್ದಾರೆ. ರಾಜ್ಯದ ಪಂಚ ಗ್ಯಾರಂಟಿ ಯೋಜನೆಯನ್ನು ಹೇಳಿಕೊಂಡೇ ಹೊರ ರಾಜ್ಯಗಳಲ್ಲೂ ಪ್ರಚಾರ ನಡೆದಿದೆ ಮತ್ತು ನಡೆಯುತ್ತಿದೆ. ಸದ್ಯ ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಖುಷಿಯಲ್ಲಿ ಕೈನಾಯಕರು ಇದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿದೆ. ಕಾಂಗ್ರೆಸ್ ನಲ್ಲಿ ಬಂಡಾಯ ಎದ್ದಿದ್ದರೂ ಅದನ್ನು ತಣ್ಣಗೆ ಮಾಡುವ ಕೆಲಸವಾಗಿದೆ. ಆದರೆ ಬಿಜೆಪಿಯಲ್ಲಿ ಬಂಡಾಯದ ಬಾವುಟ ಚುನಾವಣೆಯಲ್ಲಿ ಹಾರಾಡಿದೆ. ಹೀಗಾಗಿ ಬಿಜೆಪಿ ಪಕ್ಷದೊಳಗೆ ಮತ್ತು ಜೆಡಿಎಸ್ ನೊಂದಿಗಿನ ಮೈತ್ರಿಯಲ್ಲಿಯೂ ಸಹಮತ ಇರಲಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಎಲ್ಲೋ ಒಂದು ಕಡೆ ಮೊದಲ ಹಂತದ ಚುನಾವಣೆ ವೇಳೆಯಲ್ಲಿಯೇ ಹೊರಬಂದ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಪ್ರಕರಣ ಎರಡನೇ ಹಂತದ ಚುನಾವಣೆ ಮೇಲೆ ಬೀರಿತಾ? ಎಂಬ ಅನುಮಾನವೂ ಇಲ್ಲದಿಲ್ಲ.
ಲೆಕ್ಕಾಚಾರಗಳಿಗೆ ಫಲಿತಾಂಶವೇ ಉತ್ತರ
ಲೋಕಸಭಾ ಚುನಾವಣಾ ಆರಂಭದಿಂದ ಇಲ್ಲಿವರೆಗಿನ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದರೆ ಹಲವು ಕಡೆಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಕೂಟ ಅಲ್ಲಲ್ಲಿ ಮುಗ್ಗರಿಸಿರುವುದು ಎದ್ದು ಕಾಣಿಸುತ್ತದೆ. ಇದರ ಲಾಭ ಕಾಂಗ್ರೆಸ್ ಗೆ ಆದರೂ ಅಚ್ಚರಿಯಿಲ್ಲ. ಅದು ಏನೇ ಇರಲಿ ಹೆಚ್ಚಿನ ಸ್ಥಾ ನಗಳಲ್ಲಿ ಗೆಲ್ಲುತ್ತೇವೆಂಬ ಕೈ ನಾಯಕರ ವಿಶ್ವಾಸ ನಿಜವಾಗುತ್ತಾ? ಎಂಬುದು ಗೊತ್ತಾಗಬೇಕಾದರೆ ಜೂ.4ರ ಫಲಿತಾಂಶದ ದಿನದವರೆಗೆ ಕಾಯಲೇ ಬೇಕಾಗಿದೆ.












Click it and Unblock the Notifications