ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎಸ್ ಎಂ ಕೃಷ್ಣ 'ಪಾಂಚಜನ್ಯ', ಅಡಕತ್ತರಿಯಲ್ಲಿ ಸಿದ್ದು

|
Google Oneindia Kannada News

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ವಲಸಿಗರು, ಮೂಲ ಕಾಂಗ್ರೆಸ್ಸಿಗರು ನಡುವಿನ ಮುಸುಕಿನ ಗುದ್ದಾಟದಲ್ಲಿ ಮೂಲ ಕಾಂಗ್ರೆಸ್ಸಿಗರ ದುಗುಡು ದುಮ್ಮಾನ ತೆರೆಮೆರೆಗೆ ಸೆರೆದ ಉದಾಹರಣೆಗಳೇ ಹೆಚ್ಚಾಗಿದ್ದವು.

ಆದರೆ ಈಗ ಹೈಕಮಾಂಡ್ ಅಂಗಣದಲ್ಲಿರುವ ಈ ಮೂಲ ಕಾಂಗ್ರೆಸ್ಸಿಗರ ನೋವು, ಬವಣೆಗೆ ಹೈಕಮಾಂಡ್ ಒಂದು ತಾರ್ಕಿಕ ಅಂತ್ಯ ಹಾಡುವ ಸಾಧ್ಯತೆ ಹೆಚ್ಚಾಗಿರುವುದಕ್ಕೆ ಕಾರಣವೇನಂದರೆ, ಹೈಕಮಾಂಡ್ ವಲಯದಲ್ಲಿ ನಿಷ್ಠೆಗೆ ಹೆಸರಾಗಿರುವ ಎಸ್ ಎಂ ಕೃಷ್ಣ ಆಖಾಡಕ್ಕೆ ಇಳಿದಿರುವುದು. (ಎಸಿಬಿ ರಚನೆ, ಕೃಷ್ಣ ಕೊಟ್ಟ ಸಲಹೆ)

ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವ ಗಾದೆ ಮಾತಿನ ಹಾಗೇ, ಹೈಕಮಾಂಡ್ ಕರೆಗೇ ಕಾಯುತ್ತಿದ್ದ ಕೃಷ್ಣ ಸಾಹೇಬ್ರು, ಕಳೆದ ಎರಡು ದಿನದಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಸಿದ್ದು ಪಾಳಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೇಲ್ನೋಟಕ್ಕೆ ಇದು ಎಸಿಬಿ ರಚನೆ (ಭ್ರಷ್ಟಾಚಾರ ನಿಗ್ರಹ ದಳ) ವಿಚಾರದಲ್ಲಿನ ಗೊಂದಲ ಎಂದು ಕಂಡು ಬಂದರೂ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲೇ ಬೇಕು ಎನ್ನುವುದು ಗೌಪ್ಯವಾಗಿ ಉಳಿಯದಿಲ್ಲ.

'ಹೈಕಮಾಂಡ್ ಅನುಮತಿ' ಪಡೆಯದೇ ಲೋಕಾಯುಕ್ತ ಸಂಸ್ಥೆಯನ್ನು ಮೂಲೆಗುಂಪು ಮಾಡಿದ್ದು ಸೋನಿಯಾ ಮತ್ತು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಿಟ್ಟಾಗಲು ಪ್ರಮುಖ ಕಾರಣ. ಜೊತೆಗೆ, ಮೂರು ಅಸೆಂಬ್ಲಿ, ಪಂಚಾಯತ್ ಚುನಾವಣೆ ಫಲಿತಾಂಶ, ಪದೇ ಪದೇ ಮೂಲ ಕಾಂಗ್ರೆಸ್ಸಿಗರಿಂದ ಸಿದ್ದು ವಿರುದ್ದ ಬರುತ್ತಿರುವ ದೂರು. (ಸಿದ್ದುಗೆ ಕೃಷ್ಣ ತಿರುಗೇಟು)

ಸ್ವಪಕ್ಷೀಯರು, ವಿರೋಧ ಪಕ್ಷದವರು, ಸಾರ್ವಜನಿಕರ ಆಕ್ರೋಶ, ಹೈಕೋರ್ಟ್ ತರಾಟೆಯ ನಡುವೆಯೂ, ಎಸಿಬಿ ರಚನೆ ಶತಸಿದ್ದ ಎಂದು ಬಿಜೆಪಿ ಮುಖಂಡರ ಮುಖಕ್ಕೆ ಹೊಡೆಯುವಂತೆ, ಅಸೆಂಬ್ಲಿಯಲ್ಲಿ ಹಠ ಹಿಡಿದಿರುವ ಸಿದ್ದರಾಮಯ್ಯನವರಿಗೆ ಇದೇ ವಿಚಾರ ಮುಳುವಾದರೂ ಆಗಬಹುದು. ಕೃಷ್ಣ ತಂತ್ರಗಾರಿಕೆ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕುಮಾರಸ್ವಾಮಿ

ಕುಮಾರಸ್ವಾಮಿ

ಭ್ರಷ್ಟಾಚಾರ ನಿಗ್ರಹ ದಳ ರಚನೆ ವಿರೋಧಿಸಿ ಜೆಡಿಎಸ್ ನಾಯಕ ಕುಮಾರಸ್ವಾಮಿ, ಸೋನಿಯಾ ಮತ್ತು ರಾಹುಲ್ ಅವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ.ಕೃಷ್ಣ ಅವರಿಗೆ ಹೈಕಮಾಂಡ್ ಬುಲಾವ್ ಕೊಟ್ಟು, ರಾಜ್ಯದ ಸಂಪೂರ್ಣ ಪರಿಸ್ಥಿತಿ ಕುರಿತು ವರದಿ ಪಡೆದಿದೆ. ಪಕ್ಷದ 10ಕ್ಕೂ ಹೆಚ್ಚು ನಾಯಕರ ಜೊತೆ ಸಮಾಲೋಚನೆ ನಡೆದಿದೆ ಎನ್ನಲಾಗುತ್ತಿದೆ.

ವಾಪಸ್ ಮುಂದೂಡಿದ ಕೃಷ್ಣ

ವಾಪಸ್ ಮುಂದೂಡಿದ ಕೃಷ್ಣ

ದೆಹಲಿಯಲ್ಲಿ ಹಲವು ಮುಖಂಡರನ್ನು ಭೇಟಿಯಾಗುತ್ತಿರುವ ಕೃಷ್ಣ, ಬೆಂಗಳೂರಿಗೆ ವಾಪಸ್ ಆಗುವ ದಿನವನ್ನು ಮತ್ತೆ ಒಂದು ದಿನಕ್ಕೆ ಮುಂದೂಡಿದ್ದಾರೆ. ಅತೃಪ್ತ ಶಾಸಕರು ಸದ್ಯಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಬಾಗಿಲು ಬಡಿಯದಂತೆ ಕೃಷ್ಣ ರಾಜಕೀಯ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನುವ ಸುದ್ದಿಯಿದೆ.

ಕಾಂಗ್ರೆಸ್ಸಿಗರ ಸಿಟ್ಟು

ಕಾಂಗ್ರೆಸ್ಸಿಗರ ಸಿಟ್ಟು

ಈಗಾಗಲೇ ಹೇಳಿದಂತೆ, ಎಸಿಬಿ ರಚನೆ ಒಂದು ಕಾರಣವಾದರೂ ನಿಜಾಂಶ ಪದವಿ ಆಕಾಂಕ್ಷಿಗಳು ಕಾದು ಕಾದು ಸುಸ್ತಾಗಿರುವುದು. ಗಣೇಶನ ಮದುವೆಯ ರೀತಿಯಲ್ಲಿ ಮುಂದಕ್ಕೆ ಹೋಗುತ್ತಲೇ ಇರುವ ಸಂಪುಟ ಪುನರಾಚನೆ, ನಿಗಮ ಮಂಡಳಿ ನೇಮಕ ವಿಚಾರ, ಮುಖ್ಯಮಂತ್ರಿಗಳ ವಿರುದ್ದ ಕಾಂಗ್ರೆಸ್ಸಿಗರ ನಿಜವಾದ ಸಿಟ್ಟಿಗೆ ಕಾರಣ.

ಮಾಲೀಕಯ್ಯ ಗುತ್ತೇದಾರ್

ಮಾಲೀಕಯ್ಯ ಗುತ್ತೇದಾರ್

ಅಫ್ಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿರುವಾಗಲೇ, ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್ ತುರ್ತಾಗಿ ಎಸ್ ಎಂ ಕೃಷ್ಣಗೆ ದೆಹಲಿಗೆ ಬರುವಂತೆ ಸೂಚಿಸಿದೆ. ಕೃಷ್ಣ ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡುವ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದರಿಂದ ಶಾಸಕರ ಆಕಾಂಕ್ಷೆ ಗರಿಗೆದರಿದೆ. ಬಜೆಟ್ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಸಂಪುಟ ಪುನಾರಚಿಸುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದರಿಂದ, ಇನ್ನೂ 4-5 ದಿನ ಅತೃಪ್ತ ಶಾಸಕರು ಕಾಯಲು ನಿರ್ಧರಿಸಿದ್ದಾರೆ ಎನ್ನುವುದು ಕಾಂಗ್ರೆಸ್ ಆಪ್ತವಲಯದ ಮಾಹಿತಿ.

ಹೈಕಮಾಂಡಿಗೆ ದೂರು

ಹೈಕಮಾಂಡಿಗೆ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿಯಿಂದಾಗಿ ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದ್ದು, ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ಸರಿಪಡಿಸದಿದ್ದರೆ ಪಕ್ಷ ಭಾರಿ ಬೆಲೆ ತೆರಬೇಕಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿರುವ ಬಿಕ್ಕಟ್ಟು

ಬೂದಿ ಮುಚ್ಚಿದ ಕೆಂಡದಂತಿರುವ ಬಿಕ್ಕಟ್ಟು

ಸೋನಿಯಾ, ಅಹ್ಮದ್ ಪಟೇಲ್, ಆಂಟನಿ, ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಿರುವ ಕೃಷ್ಣ, ಕಾಂಗ್ರೆಸ್‌ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ಬೂದಿ ಮುಚ್ಚಿದ ಕೆಂಡದಂತಿರುವ ಬಿಕ್ಕಟ್ಟುಗಳನ್ನು ಬಗೆಹರಿಸದಿದ್ದರೆ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಂತೆಯೇ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೃಷ್ಣ ಎಚ್ಚರಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಸೋನಿಯಾ ಮತ್ತು ರಾಹುಲ್‌ ತಾಳ್ಮೆ

ಸೋನಿಯಾ ಮತ್ತು ರಾಹುಲ್‌ ತಾಳ್ಮೆ

ಎರಡು ದಿನಗಳಿಂದ ದೆಹಲಿಯಲ್ಲೇ ಇದ್ದ ಕೃಷ್ಣ ಮಂಗಳವಾರ (ಮಾ 29) ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಕೃಷ್ಣ ಅವರ ಮಾತುಗಳನ್ನು ಸೋನಿಯಾ ಮತ್ತು ರಾಹುಲ್‌ ತಾಳ್ಮೆಯಿಂದ ಕೇಳಿಸಿಕೊಂಡರಾದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ.

English summary
Senior Congress leader and former CM of Karnataka, S M Krishna met High Command on Tuesday (Mar 29) to discuss Anti Corruption Bureau cell formation and other state political developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X