"ಪ್ರತಾಪ್ ಸಿಂಹ ಫೋನಲ್ಲಿ ಬೆತ್ತಲೆ ಫೋಟೋ-ವಿಡಿಯೋ ಇವೆ, ಸಿಕ್ಕರೆ ಪ್ರಜ್ವಲ್ ರೇವಣ್ಣನಂತೆ ಜೈಲು ಫಿಕ್ಸ್"
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ವೈರಲ್ ಆಗಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಹಲವು ಮಹಿಳೆಯರ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅರೆಸ್ಟ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ಈ ಕೇಸ್‌ನಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದಲ್ಲದೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಮತ್ತೊಬ್ಬ ರಾಜಕಾರಣಿಯ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವುದಾಗಿ ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ. ಆ ರಾಜಕಾರಣಿಯ ಮೊಬೈಲ್ ಎಸ್‌ಐಟಿಗೆ ಕೊಟ್ಟರೆ ಪ್ರಜ್ವಲ್ ರೇವಣ್ಣ ರೀತಿ ಜೈಲು ಶಿಕ್ಷೆ ಆಗುತ್ತೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಬಿಜೆಪಿ ನಾಯಕನ ಮೇಲೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಈ ಗಂಭೀರ ಆರೋಪ ಮಾಡಿದ್ದಾರೆ. 'ಬಿಜೆಪಿ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರ ಮೊಬೈಲ್ ಫೋನ್‌ನಲ್ಲಿ ಸಂಗ್ರಹವಾಗಿರುವ ಫೋಟೋ ಮತ್ತು ವಿಡಿಯೋಗಳ ಬಗ್ಗೆ ತನಿಖೆ ನಡೆಸಿದ್ದೇ ಆದರೆ, ಪ್ರಜ್ವಲ್ ರೇವಣ್ಣ ಅವರಂತೆ ಅವರಿಗೂ ಜೈಲು ಶಿಕ್ಷೆಯಾಗುತ್ತೆ' ಎಂದು ಲಕ್ಷ್ಮಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

'ಫೋನ್ ನೋಡಿ ಅಮಿತ್ ಶಾ ಶಾಕ್'
ಇತ್ತೀಚೆಗೆ ಮಡಿಕೇರಿಯಲ್ಲಿ ಮಾತನಾಡಿರುವ ಲಕ್ಷ್ಮಣ್, '2023ರಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ನಡೆದಿತ್ತು. ಈ ಘಟನೆ ಆದ ನಂತರ ಪ್ರತಾಪ್ ಸಿಂಹ ಅವರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಪ್ರತಾಪ್ ಸಿಂಹ ಮೊಬೈಲ್‌ನಲ್ಲಿ ಬೆತ್ತಲೆ ಫೋಟೋಗಳು ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿದ್ದವು. ಇದನ್ನು ನೋಡಿ ಅಮಿತ್ ಶಾ ಅವರೇ ಶಾಕ್ ಆಗಿದ್ದರು. ಈ ವಿಚಾರವಾಗಿ ನನ್ನ ಬಳಿ ಸಾಕ್ಷಿಯೂ ಇದೆ' ಎಂದಿದ್ದಾರೆ.
'ದೆಹಲಿಯಲ್ಲಿ ಬ್ಲೂ ಬಾಯ್ ಅಂತಾರೆ'
'ಇಂತಹ ಪ್ರತಾಪ್ ಸಿಂಹ ನಮ್ಮ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಪ್ರದೀಪ್ ಈಶ್ವರ್ ಅವರನ್ನು ನಿಂದಿಸುವುದೇ ದೊಡ್ಡ ಕೆಲಸ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಪ್ರತಾಪ್ ಸಿಂಹ ಅವರನ್ನ ಬ್ಲೂ ಬಾಯ್ ಎಂದು ಕರೆಯುತ್ತಾರೆ. ಪ್ರತಾಪ್ ಸಿಂಹ ಅವರ ಮೊಬೈಲ್‌ನಲ್ಲಿ ಪ್ರಜ್ವಲ್ ರೇವಣ್ಣ ರೀತಿಯಲ್ಲೇ ಅಶ್ಲೀಲ ವಿಡಿಯೋಗಳಿವೆ. ಆ ವಿಡಿಯೋಗಳಿದ್ದ ಕಾರಣಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಪ್ರತಾಪ್ ಸಿಂಹ ಮೊಬೈಲ್ ಜಪ್ತಿ ಮಾಡಿಸಿದ್ದರು. ಪ್ರತಾಪ್ ಅವರ ಮೊಬೈಲ್‌ನಲ್ಲಿದ್ದ ವಿಡಿಯೋಗಳಿದ್ದ ಕಾರಣಕ್ಕೆ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಕಳೆದ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬಾರದು ಎಂದು ನಿರ್ಧರಿಸಿದರು' ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕಿಸುವ ನೈತಿಕತೆ ಪ್ರತಾಪ್ ಸಿಂಹಗೆ ಇದೆಯೇ? 2024ರ ಎಲೆಕ್ಷನ್‌ನಲ್ಲಿ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನೀಡಿದ್ದರೆ ನಾನು ಸುಮಾರು ಮೂರು ಲಕ್ಷ ಅಂತರದಲ್ಲಿ ಗೆಲ್ಲುತ್ತಿದ್ದೆ. ಮುಂದೆ ಪ್ರತಾಪ್ ಸಿಂಹ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ನಾನೂ ಅಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ಚಾಲೆಂಜ್ ಹಾಕಿದ್ದಾರೆ.












Click it and Unblock the Notifications