ದಲಿತ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ: ಆರ್.ಅಶೋಕ್
ಬೆಂಗಳೂರು, ಆಗಸ್ಟ್ 20: ʼದಲಿತ ಎಂಬ ಕಾರಣಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆಯೇ?ʼ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಅಲ್ಲದೆ , ದಲಿತರನ್ನು ತುಳಿಯುವ ಹಾಗೂ ಟಾರ್ಗೆಟ್ ಮಾಡುವ ಇತಿಹಾಸ ಕಾಂಗ್ರೆಸ್‌ಗೆ ಮೊದಲಿನಿಂದಲೂ ಇದೆ ಎಂದು ಕುಟುಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರ್.ಅಶೋಕ್, ʼಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತು. ಅವರಿಗೆ ಭಾರತ ರತ್ನ ಸಿಗದಂತೆ ಮಾಡಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಟಿ.ಅಂಜಯ್ಯ ಅವರನ್ನು ದಲಿತ ಎಂಬ ಕಾರಣಕ್ಕೆ ರಾಜೀವ್ ಗಾಂಧಿ ಅವರು ಸಾರ್ವಜನಿಕವಾಗಿ ಅವಮಾನ ಮಾಡಿದ್ದರು. ಬಾಬು ಜಗಜೀವನ್ ರಾಮ್ ಮತ್ತು ಸೀತಾರಾಂ ಕೇಸರಿ ಅವರು ಅಂಚಿನಲ್ಲಿರುವ ವರ್ಗಗಳ ನಾಯಕರಾಗಿದ್ದರಿಂದ ಅವರಿಗೆ ಕಾಂಗ್ರೆಸ್ ಎಂದಿಗೂ ಅರ್ಹತೆ ನೀಡಲಿಲ್ಲ ಎಂದು ಹಿಂದಿನ ಘಟನೆಗಳನ್ನು ಒತ್ತಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮೊದಲಿನಿಂದಲೂ ಬುಡಕಟ್ಟು ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿಯಾಗುವುದನ್ನು ತಡೆಯಲು ಪ್ರಯತ್ನಿಸಿದವು. ಹಿಂದುಳಿದ ವರ್ಗಗಳಿಗೆ (OBC) ಸೇರಿದ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಅವರ ವಿರುದ್ಧ ದ್ವೇಷ ಕಾರುತ್ತಿದೆ. ಈಗ ಅದೇ ರೀತಿ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ದಲಿತ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಪಕ್ಷವು ಇಂದಿಗೂ ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ದ್ವೇಷಿಸುವ ಊಳಿಗಮಾನ್ಯ ಪದ್ಧತಿಯ ಒಂದು ಶ್ರೇಷ್ಠ ಉದಾಹರಣೆ. ರಾಹುಲ್ ಗಾಂಧಿ ಅವರೇ ದಲಿತ ಸಾಂವಿಧಾನಿಕ ಅಧಿಕಾರಿಗೆ ಅವಮಾನ ಮಾಡಿದ್ದಕ್ಕಾಗಿ ನಿಮ್ಮ ನಾಲಾಯಕ್ ಸಚಿವರಾದ ಕೃಷ್ಣಬೈರೇಗೌಡರನ್ನು ಯಾವಾಗ ವಜಾ ಮಾಡುತ್ತೀರಿ ಎಂದೂ ಪ್ರಶ್ನಿಸಿದ್ದಾರೆ.
ರಾಜ್ಯಪಾಲರನ್ನು "ನಾಲಾಯಕ್" ಎಂದಿದ್ದ ಸಚಿವ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರಾಜ್ಯಪಾಲರನ್ನು ನಿಂದಿಸಿದ್ದರು. ಭಾಷಣದ ವೇಳೆ, ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರು ರಾಜ್ಯಪಾಲರ ಸ್ಥಾನದಲ್ಲಿ ಮುಂದುವರಿಯಲು ʼನಾಲಾಯಕ್ʼ ಎಂದು ಹೇಳಿದ್ದರು. ಇದಕ್ಕೆ ಆರ್.ಅಶೋಕ್ ಟಾಂಗ್ ನೀಡುವ ಮೂಲಕ ಸಚಿವ ಕೃಷ್ಣಬೈರೇಗೌಡರನ್ನು ನಾಲಾಯಕ್ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಪ್ರಮುಖ ಪ್ರದೇಶದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿರುವ ಆರೋಪವಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಕೂಡ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡಿದ್ದರು. ಇದರ ವಿರುದ್ಧ ರಾಜ್ಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯೂ ನಡೆಯಿತು.












Click it and Unblock the Notifications