ಕಾರಜೋಳರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ಸಿಗರ ಗೂಂಡಾಗಿರಿ ಖಂಡನೀಯ:ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು,ಡಿಸೆಂಬರ್ 19: ಗೋವಿಂದ ಕಾರಜೋಳರವರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಗೂಂಡಾಗಳ ಗೂಂಡಾಗಿರಿಯನ್ನು ಖಂಡತುಂಡವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದರು.
ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆ ಚಿತ್ರದುರ್ಗದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ಮಾಡುವಾಗ ಕೆಲವು ಕಾಂಗ್ರೆಸ್ ಗೂಂಡಾಗಳು ಬಂದು ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕಾಗೋಷ್ಠಿಗೆ ತೊಂದರೆಯನ್ನುಂಟು ಮಾಡಿ ಅವರ ಮೇಲೆ ಎರಗಿದ್ದು ಖಂಡನೀಯ ಎಂದು ತಿಳಿಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಪಕ್ಷದ ಪರವಾಗಿ ಅನೇಕ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬಂದ ಬಳಿಕ ದಲಿತರಿಗಾಗಿ ಮೀಸಲಿಟ್ಟ ಎಸ್‍ಸಿಎಸ್‍ಪಿಎಸ್‍ಟಿಪಿ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವುದನ್ನು ನಮ್ಮ ಪಕ್ಷ ಮೊದಲಿನಿಂದಲೂ ಖಂಡಿಸುತ್ತಿದೆ ಹಾಗೂ ವಿರೋಧಿಸುತ್ತಿದೆ. ಇದೇ ವಿಚಾರವನ್ನು ಬಳಸಿ, ನಾನು, ಕಾರಜೋಳ, ರಾಜೀವ್, ಎನ್.ಮಹೇಶ್ ಹೀಗೆ ಅನೇಕ ಮುಖಂಡರು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಆಂದೋಲನ ಶುರು ಮಾಡಿದ್ದೇವೆ ಎಂದು ವಿವರಿಸಿದರು.
ರಾಜ್ಯದಲ್ಲಿ @INCKarnataka ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಸಿಗಲು ಸಾಧ್ಯವೇ ಇಲ್ಲ.
— BJP Karnataka (@BJP4Karnataka) December 19, 2023
ಹಿಂದುಳಿದವರು, ದಲಿತರ ಅಭಿವೃದ್ಧಿಗೆ ಮೀಸಲಿದ್ದ ಅನುದಾನವನ್ನು ಕಿತ್ತುಕೊಂಡಿದ್ದನ್ನು ಪ್ರಶ್ನಿಸಿ ದಲಿತ ನಾಯಕ @GovindKarjol ಅವರು ಸುದ್ದಿಗೋಷ್ಠಿ… pic.twitter.com/sni58ryl6G
ಕಾಂಗ್ರೆಸ್ ಪಕ್ಷ ದಲಿತರಿಗೆ ದೋಖಾ ಮಾಡಿದೆ; ಅನ್ಯಾಯ ಮಾಡುತ್ತಿದೆ. ಮೋಸ, ವಂಚನೆ ಮಾಡುವ ಕುರಿತು ನಮ್ಮ ಸಮುದಾಯದ ಅಂದರೆ ಪರಿಶಿಷ್ಟ ಜಾತಿ, ವರ್ಗಗಳ ಜನರಿಗೆ ತಿಳಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಕಾರಜೋಳರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಗೂಂಡಾ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. 11 ಸಾವಿರ ಕೋಟಿ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೆ ಅದಕ್ಕೂ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.

ದಲಿತರಿಗೆ ಇಲ್ಲಸಲ್ಲದ ಆಶ್ವಾಸನೆ ಕೊಟ್ಟು ಈ ಸರಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಂತೆ 11 ಸಾವಿರ ಕೋಟಿ ರೂಪಾಯಿಯನ್ನು ದಲಿತರ ಹಣಕ್ಕೆ ಕನ್ನಾ ಹಾಕಿದ್ದೀರಿ. ಈ ನಿಮ್ಮ ನಡೆಯ ಕುರಿತು ಜನರಿಗೆ ತಿಳಿಸುವ ಆಂದೋಲನ ಮಾಡುತ್ತೇವೆ ಎಂದು ಪ್ರಕಟಿಸಿದರು. ಕಾಂಗ್ರೆಸ್ ಗೂಂಡಾಗಿರಿ ಮುಂದುವರೆದರೆ ಅದಕ್ಕೆ ತಕ್ಕ ಉತ್ತರವನ್ನು ಬಿಜೆಪಿ ಕಾರ್ಯಕರ್ತರು ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಸಿಗಲು ಸಾಧ್ಯವೇ ಇಲ್ಲ. ಹಿಂದುಳಿದವರು, ದಲಿತರ ಅಭಿವೃದ್ಧಿಗೆ ಮೀಸಲಿದ್ದ ಅನುದಾನವನ್ನು ಕಿತ್ತುಕೊಂಡಿದ್ದನ್ನು ಪ್ರಶ್ನಿಸಿ ದಲಿತ ನಾಯಕ ಗೋವಿಂದ ಕಾರಜೋಳ ಅವರು ಸುದ್ದಿಗೋಷ್ಠಿ ಮಾಡುತ್ತಿದ್ದರೆ, ದಲಿತ ವಿರೋಧಿ ಸಿದ್ದರಾಮಯ್ಯ ಅವರ ಕೃಪಾಪೋಷಿತ ಕಾಂಗ್ರೆಸ್ಸಿನ ಗೂಂಡಾಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ.
ಅಶಾಂತಿ ಸೃಷ್ಟಿಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಗೂಂಡಾಗಳಿಗೆ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿರುವುದು ಶತಸಿದ್ಧ. ಗೃಹ ಸಚಿವ ಪರಮೇಶ್ವರ್ ಅವರಿಗೆ ದಲಿತರ ಮೇಲೆ ಕಾಳಜಿ ಇದ್ದರೆ, ಕಾನೂನಿನ ಮೇಲೆ ಗೌರವವಿದ್ದರೆ ಕೂಡಲೇ ಸುದ್ದಿಗೋಷ್ಠಿಗೆ ನುಗ್ಗಿ ಗಲಾಟೆ ಮಾಡಿದ ಗೂಂಡಾಗಳ ವಿರುದ್ಧ ಕ್ರಮಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications