ಶ್ರೀರಾಮುಲು ಚುನಾವಣಾ ಉಮೇದುವಾರಿಕೆ ರದ್ದು ಪಡಿಸಿ: ಕಾಂಗ್ರೆಸ್
ಬೆಂಗಳೂರು, ಮೇ 11: ಜನಾರ್ದನ ರೆಡ್ಡಿ ಗಣಿ ಲೂಟಿ ಹಗರಣದಲ್ಲಿ ನ್ಯಾಯಮೂರ್ತಿಗೆ ಲಂಚ ನೀಡುವ ಕುರಿತ ಶ್ರೀರಾಮುಲು ಅವರದ್ದು ಎನ್ನಲಾದ ವಿಡಿಯೋ ಒಂದು ಹರಿದಾಡುತ್ತಿದ್ದ ಅದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕಾಂಗ್ರೆಸ್, ಶ್ರೀರಾಮುಲು ಅವರ ಚುನಾವಣಾ ಉಮೇದುವಾರಿಕೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ.
'ಶ್ರೀರಾಮುಲು ಅವರು ಭ್ರಷ್ಟಾಚಾರ ಮಾಡಿರುವ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರ ಬಗ್ಗೆ ವಿಚಾರಣೆ ಆಗಬೇಕಿದೆ ಹಾಗಾಗಿ ಈಗ ಅವರು ಚುನಾವಣೆಗೆ ಸ್ಪರ್ಧಿಸಿರುವ ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳ ಅವರ ಚುನಾವಣಾ ಉಮೇದುವಾರಿಕೆಯನ್ನು ರದ್ದು ಮಾಡಬೇಕು' ಎಂದು ಆಯೋಗಕ್ಕೆ ಮನವಿ ಮಾಡಿದೆ.

ಶ್ರೀರಾಮುಲು ಅವರು ಇದ್ದಾರೆ ಎನ್ನಲಾಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋನಲ್ಲಿ ಜಡ್ಜ್ ಒಬ್ಬರಿಗೆ 160 ಕೋಟಿ ಲಂಚ ಕೊಡುವ ಬಗ್ಗೆ ಮಾತನಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ವಿಡಿಯೋಕ್ಕೂ ತಮಗೂ ಸಂಬಂಧವಿಲ್ಲ ಎಂದು ಶ್ರೀರಾಮುಲು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಸಹ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದು ರಾಮುಲು ಅವರ ಸ್ಪರ್ಧೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications