ಕರ್ನಾಟಕದ ಶಾಲೆಗಳಲ್ಲಿ ಹಿಂದಿನ ಪಠ್ಯಪುಸ್ತಕ ರೀ ಎಂಟ್ರಿ ಗ್ಯಾರಂಟಿ!
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ನಂತರ ತೀವ್ರ ಚರ್ಚೆಗೆ ಕಾರಣವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಿಲುವು ಬಹುತೇಕ ಪಕ್ಕಾ ಆಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ವಿದ್ಯಾರ್ಥಿಗಳ ಪುಸ್ತಕಕ್ಕೆ ಎಂಟ್ರಿಯಾಗಿದ್ದ ಬಹುತೇಕ ವಿವಾದಾತ್ಮಕ ವಿಚಾರಗಳನ್ನ ತೆಗೆದು ಹಾಕುವುದು ಗ್ಯಾರಂಟಿ ಆಗಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಟ್ವಿಟ್ಟರ್ ಅಕೌಂಟ್ ಟ್ವೀಟ್ ಮಾಡಿದೆ.
ಹೌದು, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳ ಪೈಕಿ ಇದು ಕೂಡ ಒಂದಾಗಿತ್ತು. ರಾಜ್ಯದಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕಕ್ಕೆ ಸೇರಿಸಿದ್ದ ವಿವಾದಾತ್ಮಕ ವಿಚಾರಗಳನ್ನ ತೆಗೆದುಹಾಕಿ, ಈ ಹಿಂದೆ ಜಾರಿಯಲ್ಲಿದ್ದ ಪಠ್ಯ ಕ್ರಮ ಜಾರಿಗೆ ತರಲಾಗುವುದು ಎಂದಿದ್ದರು ಸಿದ್ದರಾಮಯ್ಯ. ಅಲ್ಲದೆ ಕಾಂಗ್ರೆಸ್‌ನ ಬಹುತೇಕ ನಾಯಕರು ಇದೇ ಮಾತು ನೀಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ 135 ಸ್ಥಾನದಲ್ಲಿ ಗೆದ್ದು ಬೀಗಿದ್ದು, ಸರ್ಕಾರ ರಚನೆ ಮಾಡಿದೆ. ಹೀಗಾಗಿ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ, ಹಿಂದೆ ಇದ್ದ ಪಠ್ಯಕ್ರಮ ಮುಂದುವರಿಸಲು ಮುಂದಾಗಿದೆ.

ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ!
ಅಂದಹಾಗೆ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಒತ್ತಾಯ ಕೇಳಿಬರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಾಹಿತಿಗಳು ಮಾತುಕತೆ ನಡೆಸಿದ್ರು. ಆಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರಚಿಸಿದ್ದ ಪಠ್ಯಕ್ರಮ ತೆಗೆದು ಹಾಕಿ, ಹಳೆಯ ಪಠ್ಯವನ್ನೇ ಮುಂದುವರಿಸಲು ಒತ್ತಾಯಿಸಲಾಗಿತ್ತು. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ, ಕೆಪಿಸಿಸಿಯ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹಳೆಯ ಪಠ್ಯಕ್ರಮ ವಾಪಸ್ ಬರೋದು ಬಹುತೇಕ ಗ್ಯಾರಂಟಿ.
ಪಠ್ಯ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿದ ಗೊಂದಲಗಳನ್ನು ಸರಿಪಡಿಸುತ್ತೇವೆ, ಮಕ್ಕಳಿಗೆ ಉತ್ತಮವಾದ ಶೈಕ್ಷಣಿಕ ಭವಿಷ್ಯ ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.
— Karnataka Congress (@INCKarnataka) May 30, 2023
ಹಿಂದಿನ ಪಠ್ಯಗಳನ್ನೇ ಮುಂದುವರೆಸುವ ಜನರ ಬೇಡಿಕೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಲಿದೆ.
ನಾಡು, ನುಡಿಗೆ, ಮಹನೀಯರಿಗೆ ಅವಮಾನಿಸಿದ ದೋಷಪೂರಿತ… pic.twitter.com/GgzirALvHn
ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ?
'ಪಠ್ಯ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿದ ಗೊಂದಲಗಳನ್ನು ಸರಿಪಡಿಸುತ್ತೇವೆ, ಮಕ್ಕಳಿಗೆ ಉತ್ತಮವಾದ ಶೈಕ್ಷಣಿಕ ಭವಿಷ್ಯ ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಹಿಂದಿನ ಪಠ್ಯಗಳನ್ನೇ ಮುಂದುವರೆಸುವ ಜನರ ಬೇಡಿಕೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಲಿದೆ. ನಾಡು, ನುಡಿಗೆ, ಮಹನೀಯರಿಗೆ ಅವಮಾನಿಸಿದ ದೋಷಪೂರಿತ ಪಠ್ಯವನ್ನು ಮುಂದುವರೆಸುವುದಿಲ್ಲ.' ಎಂದು ಸ್ಪಷ್ಟವಾಗಿ ಟ್ವೀಟ್ ಮೂಲಕ ಕಾಂಗ್ರೆಸ್ ತಿಳಿಸಿದೆ. ಇದು ಪಠ್ಯಕ್ರಮ ಬದಲಾವಣೆಗೆ ಮೊದಲ ಹೆಜ್ಜೆಯಾಗುವುದು ಪಕ್ಕಾ.

ಬಿಜೆಪಿ ಪಠ್ಯಪುಸ್ತಕದ ವಿರುದ್ಧ ಅಭಿಯಾನ!
ಹಿಂದಿನ ಬಿಜೆಪಿ ಸರ್ಕಾರ, ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿ ಮಾತು ಕೇಳಿ ಹೊಸ ಪಠ್ಯ ರಚನೆ ಮಾಡಿ ಪುಸ್ತಕಗಳನ್ನೂ ಮುದ್ರಿಸಿದೆ. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆಕ್ರೋಶವು ಭುಗಿಲೆದ್ದಿದ್ದು, ರೋಹಿತ್ ಚಕ್ರತೀರ್ಥ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯ ಬದಲಾಯಿಸಿ, 2017-18ರಲ್ಲಿ ಜಾರಿಯಲ್ಲಿದ್ದ ಪಠ್ಯಕ್ರಮ & ಪಠ್ಯ ಪುಸ್ತಕಗಳನ್ನೇ ಮಕ್ಕಳಿಗೆ ನೀಡಲು ಒತ್ತಾಯ ಕೇಳಿಬಂದಿತ್ತು. ಇದೀಗ ಸರ್ಕಾರ ಸಾಹಿತಿಗಳ ಮನವಿಗೆ ಸ್ಪಂದಿಸಿ ಕ್ರಮಕ್ಕೆ ಮುಂದಾಗಿದೆ.
262 ಕೋಟಿ ರೂಪಾಯಿ ಕಥೆ ಏನು?
ಹೌದು, ಈಗಾಗಲೇ ಶಿಕ್ಷಣ ಇಲಾಖೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯಪುಸ್ತಕ ಮುದ್ರಿಸಿಬಿಟ್ಟಿದೆ. ಶಾಲೆಗಳಿಗೂ ಹೊಸ ಪುಸ್ತಕ ತಲುಪಿಸಲು ಸಿದ್ಧತೆ ನಡೆಸಿದೆಯಂತೆ. ಕರ್ನಾಟಕದಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ & ಖಾಸಗಿ ಅನುದಾನಿತ ಶಾಲೆಗಳಿವೆ. 1 ಕೋಟಿಗೂ ಹೆಚ್ಚು ಮಕ್ಕಳು ಓದುತ್ತಿದ್ದು, ಈಗಾಗಲೇ ಶಿಕ್ಷಣ ಇಲಾಖೆ ಪಠ್ಯಪುಸ್ತಕ ಮುದ್ರಣ ಮಾಡಲು 262 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಯಾರೋ ಮಾಡಿದ್ದ ತಪ್ಪಿಗೆ ಪಠ್ಯಪುಸ್ತಕ ಮರು ಮುದ್ರಣ ಮಾಡುವ ಸ್ಥಿತಿ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಾ? ಎಂಬ ಡೌಟ್ ಶುರುವಾಗಿದೆ.
ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ?
ಅಂದಹಾಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಹಲವರು ಒತ್ತಾಯ ಮಾಡಿದ್ದಾರೆ. ಇದರ ಜೊತೆ ಹಲವು ಸಂಘ ಸಂಸ್ಥೆಗಳು ಕೂಡ ರೋಹಿತ್ ಚಕ್ರತೀರ್ಥ ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಈ ಹೊತ್ತಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯ ಸರ್ಕಾರಕ್ಕೆ 262 ಕೋಟಿ ರೂಪಾಯಿ ನಷ್ಟವಾಗುತ್ತಿರುವ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾ ಸಿದ್ದರಾಮಯ್ಯ ಸರ್ಕಾರ? ಎಂಬ ಅನುಮಾನ ಭುಗಿಲೆದ್ದಿದೆ.












Click it and Unblock the Notifications