ಸೂಕ್ತ ಸ್ಥಾನಕ್ಕೆ ಲಿಂಗಾಯತರು ಬೇಡಿಕೆ; ಲಿಂಗಾಯತರಿಗೆ ನ್ಯಾಯಕೊಡಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ: ವಿಜಯೇಂದ್ರ ಹೇಳಿದ್ಯಾಕೆ?
ಬೆಂಗಳೂರು, ಮೇ 19: ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಆಗಿ, ಡಿ ಕೆ ಶಿವಕುಮಾರ್ ಅವರನ್ನ ಡಿಸಿಎಂ ಆಗಿ ಹೈಕಮಾಂಡ್ ಘೋಷಿಸಿದ್ದು, ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿ ವೈ ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ಲಿಂಗಾಯತ ಸಮುದಾಯವನ್ನ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಲಿಂಗಾಯತ ಹಿರಿಯ ನಾಯಕರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡುವ ವಿಚಾರ ಬಂದಾಗ ಏಕಾಏಕಿ ಮೌನವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ವಿಪರ್ಯಾಸ ಏನೆಂದರೆ ಕಾಂಗ್ರೆಸ್‌ನಲ್ಲಿ 39 ಲಿಂಗಾಯತ ಸಮುದಾಯದ ಶಾಸಕರು ಗೆದ್ದಿದ್ದಾರೆ. ಆದರೂ ಕೂಡ ಅವರು ತಮ್ಮಗೇ ಸೂಕ್ತ ಸ್ಥಾನಕ್ಕೆ ಬಲವಾದ ಬೇಡಿಕೆಯಿಡಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನ ನಿಜವಾದ ಮುಖವನ್ನು ಸಮಯ ಅನಾವರಣಗೊಳಿಸಿದೆ. ಲಿಂಗಾಯತರನ್ನು ಯಾವಾಗಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್‌ನಿಂದ ಲಿಂಗಾಯತ ಸಮುದಾಯಕ್ಕೆ ನಿಜವಾದ ನ್ಯಾಯ ಕೊಡಲು ಸಾಧ್ಯವೇ ಇಲ್ಲ. ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಬಿಜೆಪಿ ಪ್ರತಿಪಾದಿಸುತ್ತಿದೆ. ಬಸವಣ್ಣನವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಬಿಜೆಪಿ ಒದಗಿಸುತ್ತಿದೆ ಎಂದಿದ್ದಾರೆ.
ಕರ್ನಾಟಕದ ಪ್ರಜೆಗಳು ಕಾಂಗ್ರೆಸ್‌ನ ಸುಳ್ಳುಗಳಿಗೆ ಯಾಮಾರಿರುವುದನ್ನು ಶೀಘ್ರದಲ್ಲಿಯೇ ಅರಿತುಕೊಳ್ಳುತ್ತಾರೆ. ಅದಲ್ಲದೇ ಭಾರತ ಮಾತೆಯ ಸೇವೆ ಮಾಡಲು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಿಲ್ಲುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications