ಕಾಂಗ್ರೆಸ್‌ನತ್ತ ಸೋಮಣ್ಣ ಚಿತ್ತ!? ಅರ್ಧಕ್ಕೆ ಬಿಜೆಪಿ ಯಾತ್ರೆ ಮೊಟಕುಗೊಳಿಸಿದ ಸೋಮಣ್ಣ; ಆಗಿದ್ದಾದರೂ ಏನು?
ಚುನಾವಣೆ ಹೊತ್ತಿನಲ್ಲಿ ಸಚಿವರಾದ ಆರ್.ಅಶೋಕ್ ಹಾಗೂ ವಿ ಸೋಮಣ್ಣ ನಡುವೆ ಮನಸ್ತಾಪ ಭುಗಿಲೆದ್ದಿದೆ.
ಬೆಂಗಳೂರು,ಮಾರ್ಚ್ 6: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ರೂಢ ಬಿಜೆಪಿ ಪಕ್ಷ ರಾಜ್ಯಾದ್ಯಂತ ಫುಲ್ ಆಕ್ಟವ್ ಆಗಿದೆ. ಆದರೆ ಪಕ್ಷದ ಹಿರಿಯ ನಾಯಕರಲ್ಲೇ ಇನ್ನಷ್ಟು ಮನಸ್ತಾಪ ಭುಗಿಲೆದ್ದಿದೆ.
ಇತ್ತ ಬಿಜೆಪಿ ಹೈಕಮಾಂಡ್ ನಾಯಕರನ್ನ ರಾಜ್ಯಕ್ಕೆ ಕರೆತರುವ ಮೂಲಕ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ರೆ ಇತ್ತ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ ಹಾಗೂ ಸಚಿವ ವಿ.ಸೋಮಣ್ಣ ಬಿಜೆಪಿ ಪಕ್ಷವನ್ನ ಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಹಲವು ನಾಯಕರಿಗೆ ಗಾಳ ಹಾಕಿದ್ದು, ಸೋಮಣ್ಣ ಅವರನ್ನ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.

ಹೌದು, ಕಳೆದ ಕೆಲ ದಿನಗಳಿಂದ ಹಿರಿಯ ಸಚಿವರಲ್ಲೇ ಸಾಕಷ್ಟು ಮನಸ್ತಾಪಗಳು ಸೃಷ್ಟಿಯಾಗಿದೆ. ಸಚಿವರಾದ ಅಶೋಕ್ ಮತ್ತು ವಿ.ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾದ ಹಿನ್ನೆಲೆ ಸೋಮವಾರ ಬೆಂಗಳೂರು ನಗರದ ನಾಗರಬಾವಿ ಬಳಿ ಬಿಜೆಪಿ ವಿಜಯಸಂಕಲ್ಪರಥಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ನಾಗರಬಾವಿಯಿಂದ ನಾಯಂಡಹಳ್ಳಿವರೆಗೆ ರಥಯಾತ್ರೆ ನಿಗದಿಯಾಗಿತ್ತು. ಆದರೆ ನಾಯಂಡಹಳ್ಳಿವರೆಗೆ ರಥಯಾತ್ರೆಯಲ್ಲಿ ತೆರಳಲು ಅಶೋಕ್ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಸೋಮಣ್ಣ ಅರ್ಧಕ್ಕೆ ಯಾತ್ರೆ ಮೊಟಕುಗೊಳಿಸಿದ್ದಾರೆ.
ಹಿಂದಿನಿಂದಲೂ ಸಹ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್ ಅಶೋಕ್ ನಡುವೆ ಸಾಕಷ್ಟು ಜಟಾಪಟಿ ನಡೆದಿತ್ತು. ಬೆಂಗಳೂರು ಜಿಲ್ಲಾ ಉಸ್ತುವಾರಿ ವಿಚಾರದಲ್ಲೂ ಈ ಇಬ್ಬರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಉಸ್ತುವಾರಿಯನ್ನ ಯಾರಿಗೆ ಕೊಡದೇ ತಮ್ಮ ಬಳಿಯಲ್ಲೇ ಇಟ್ಟುಕೊಳ್ಳುವ ಮೂಲಕ ಇಬ್ಬರ ನಡುವಿನ ಅಸಮಾಧಾನವನ್ನ ಶಮನಗೊಳಿಸಿದ್ರೂ ಇಬ್ಬರ ನಡುವೆ ಅಷ್ಟಾಗಿ ಸಮನ್ವಯತೆ ಕಂಡು ಬರಲಿಲ್ಲ.

ಚಾಮರಾಜನಗರ ವಿಜಯಸಂಕಲ್ಪ ಯಾತ್ರೆಗೂ ಸೋಮಣ್ಣ ಗೈರು
ಇನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಯಾತ್ರೆಗೆ ಗೈರಾಗಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸಿತ್ತು. ಇನ್ನೂ ಸೋಮಣ್ಣ ಅವರ ನಡೆಯಿಂದಾಗಿ ಹಲವು ಊಹಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯನ್ನ ಅರ್ಧಕ್ಕೆ ಬಿಟ್ಟು ಹೋಗಿರುವುದನ್ನ ನೋಡಿದ್ರೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಈಗಾಗಲೇ ಸಚಿವ ವಿ ಸೋಮಣ್ಣ ಅವರನ್ನ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗುತ್ತಾರಾ ಎನ್ನುವ ಮಾತುಗಳು ಕೇಳಿ ಬಂದಿವೆ.












Click it and Unblock the Notifications