ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಏ. 9 : ಕೆಎಸ್ಆರ್‌ಟಿಸಿಯ ಮಯೂರ ಬಸ್ ಅಸಮರ್ಪಕ ನಿರ್ವಹಣೆ ಮೂಲಕ ರಾಜ್ಯದ ಬೊಕ್ಕಸಕ್ಕೆ 6.37 ಕೋಟಿ ರೂ.ನಷ್ಟ ಉಂಟಾಗಿದೆ. ನಿಗಮದ ಮುಖ್ಯ ಎಂಜಿನಿಯರ್ ಬಿ.ಮುಕ್ಕಣ್ಣ ಅವರು ಇದಕ್ಕೆ ಕಾರಣವಾಗಿದ್ದು, ಅವರನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಕ್ಷಿಸುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಗಿರೀಶ ಗೌಡ ಅವರು ಬುಧವಾರ ಈ ದೂರು ನೀಡಿದ್ದಾರೆ. 2004 ರಿಂದ 2007ರವರೆಗೆ ಕೆಎಸ್ಆರ್‌ಟಿಯಲ್ಲಿ 119 ಅಶ್ವಶಕ್ತಿ ಎಂಜಿನ್ ಬಳಸಿಕೊಂಡು 53 ಮಯೂರ ಬಸ್‌ಗಳನ್ನು ವಿನ್ಯಾಸಗೊಳಿಸಿ ಸಂಚಾರಕ್ಕೆ ಬಿಡಲಾಗಿದೆ. [487 ಟಾಟಾ ಬಸ್ ಖರೀದಿ ಮಾಡಲಿದೆ ಸಾರಿಗೆ ಇಲಾಖೆ]

ಯಾವುದೇ ತಾಂತ್ರಿಕ ಮಾನದಂಡಗಳನ್ನು ಅನುಸರಿಸದೇ ಬಸ್ ವಿನ್ಯಾಸಗೊಳಿಸಿ ಸಂಚಾರಕ್ಕೆ ಬಿಟ್ಟಿರುವುದರಿಂದ ಕೆಎಸ್ಆರ್‌ಟಿಸಿಗೆ 6.37 ಕೋಟಿ ನಷ್ಟ ಉಂಟಾಗಿದೆ. ನಿಗಮದ ಮುಖ್ಯ ಎಂಜಿನಿಯರ್ ಬಿ.ಮುಕ್ಕಣ್ಣ ಅವರು ಇದಕ್ಕೆ ನೇರ ಹೊಣೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. [ಕರ್ನಾಟಕದ ಸಾರಿಗೆ ಸಂಸ್ಥೆಗಳ ನಷ್ಟ ಏನೂ ಅಲ್ಲಾ ಸ್ವಾಮಿ!]
ಮುಖ್ಯ ಎಂಜಿನಿಯರ್ ಬಿ.ಮುಕ್ಕಣ್ಣ ಅವರ ತಪ್ಪಿನಿಂದ ನಷ್ಟ ಉಂಟಾಗಿದೆ ಎಂಬುದು ನಿಗಮದ ಆಂತರಿಕ ತನಿಖೆಯಿಂದ ಸಾಬೀತಾಗಿದೆ. 2011ರಲ್ಲಿ ಮಹಾಲೇಖಪಾರ ವರದಿಯಲ್ಲಿಯೂ ಇದನ್ನು ದೃಢಪಡಿಸಲಾಗಿದೆ. ಆದರೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಕ್ಕಣ್ಣ ವಿರುದ್ಧ ಕ್ರಮ ಕೈಗೊಳ್ಳದೇ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಸಾರಿಗೆ ನಿಗಮದ ನಷ್ಟದ ಪಟ್ಟಿ ಕೊಟ್ಟ ಸಚಿವರು]
ಮುಕ್ಕಣ್ಣ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಕ್ಕಣ್ಣ ವಿರುದ್ಧ ಕ್ರಮ ಕೈಗೊಳ್ಳದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications