Hubballi: ಹಳಿ ತಪ್ಪಿದ ರೈಲಿನ 11 ಬೋಗಿಗಳು, ಸಂಚಾರ ವ್ಯತ್ಯಯ
ಹುಬ್ಬಳ್ಳಿ, ಆಗಸ್ಟ್ 09: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಶುಕ್ರವಾರ ರೈಲಿನ ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿದೆ ಎಂದು ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಲಿಸುವ ಸಂದರ್ಭದಲ್ಲಿ ರೈಲಿನ ಒಂದು ಚಕ್ರ ಹಳಿ ತಪ್ಪುತ್ತಿದ್ದಂತೆ ಒಟ್ಟು ಸುಮಾರು 11 ಬೋಗಿಗಳು ಹಳಿ ತಪ್ಪಿದ್ದು, ಟ್ರ್ಯಾಕ್ ಪಕ್ಕಕ್ಕೆ ಉರುಳಿದ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ.
ನೈಋತ್ಯ ರೈಲ್ವೆ ವಲಯ 'ದೂದ್ ಸಾಗರ ಹಾಗೂ ಸೋನಾಲಿಂ ರೈಲು ಮಾರ್ಗ'ದ ಮಧ್ಯೆ ಈ ಘಟನೆ ಸಂಭವಿಸಿದೆ. ಈ ಮಾರ್ಗದ ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ನೆರೆಯ ರಾಜ್ಯ ಗೋವಾದ ವಾಸ್ಕೋದಿಂದ ಕರ್ನಾಟಕದ ಹೊಸಪೇಟೆ ಕಡೆಗೆ ಈ ಗೂಡ್ಸ್ ರೈಲು ತೆರಳುತ್ತಿತ್ತು. ಕಲ್ಲಿದ್ದಲು ಹೊತ್ತು ತೆರಳುತ್ತಿದ್ದ ಈ ರೈಲು ಕ್ಯಾಸೆಲ್ ರಾಕ್ ಬಳಿಕ ಹಳಿ ತಪ್ಪಿದ್ದರಿಂದ ರೈಲಿನ 11 ಬೋಗಿಗಳು ನೆಲಕ್ಕುರುಳಿವೆ. ಲೋಡ್ ಆಗಿದ್ದ ಕಲ್ಲಿದ್ದಲು ಎಲ್ಲೆಂದರಲ್ಲಿ ಬಿದ್ದು ವ್ಯರ್ಥವಾಗಿದೆ.
ಹೊಸಪೇಟೆ ಬಳಿಯ ಜಿಂದಾಲ್ ಕಂಪನಿಯು ಎಂದಿನಂತೆ ಗೋವಾದ ವಾಸ್ಕೋದಿಂದ ಕಲ್ಲಿದ್ದಲು ಆಮದು ತರಿಸಿಕೊಳ್ಳುತ್ತದೆ. ಈ ಸರಕು ಹೊತ್ತು ಬರುವಾಗ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿ ಆಗಿದೆ. ಸದ್ಯ ಹುಬ್ಬಳ್ಳಿ ಮತ್ತು ಬೆಳಗಾವಿ ರೈಲುಗಳ ಸಂಚಾರದಲ್ಲಿ ಒಂದಷ್ಟು ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಗ ಎಲ್ಲ ರೈಲುಗಳ ಸಂಚಾರ ಸ್ಥಗಿತ
ದೂದ್ ಸಾಗರ್‌ನಿಂದ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15ರ ಸಮೀಪ ತೋರಣಗಲ್ ಹೊಸಪೇಟೆಯಲ್ಲಿ ವಾಸ್ಕೋದಿಂದ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸುವ ಸರಕು ರೈಲು ದಬ್ಬೆಯ ಬಳಿ ಹಳಿ ತಪ್ಪಿದೆ. ಸದ್ಯ ಈ ಮಾರ್ಗದಲ್ಲಿ ಎಲ್ಲಾ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ.
ಹುಬ್ಬಳ್ಳಿ-ಲೋಂಡಾ- ಗೋವಾ ರೈಲು ಮಾರ್ಗವು ಅತ್ಯಂತ ದುರ್ಗಮ ಪ್ರದೇಶವಾಗಿದೆ. ಕಾಡುವೆ, ಕಣವೆಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ರೈಲು ಮಾರ್ಗ ಬಿಟ್ಟರೆ ಬೇರಾವ ಮಾರ್ಗವು ಇಲ್ಲಿಲ್ಲ. ಇದೀಗ ಬಿದ್ದ ರೈಲು ಬೋಗಿಗಳನ್ನು ತೆರವುಗೊಳಿಸಲು, ಕಲ್ಲಿದ್ದಲ್ಲ ಸಾಗಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಅಲ್ಲದೇ ಗೋವಾದ ಗಡಿಭಾಗದಿಂದ ನಿತ್ಯ ಕರ್ನಾಟಕಕ್ಕೆ ಬರುತ್ತಿದ್ದ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ.












Click it and Unblock the Notifications