ಸೈಕಲ್ ಹಿಡಿದ ತಮ್ಮ ಹಳೇ ಫೋಟೋ ಹಾಕಿ ಯಡಿಯೂರಪ್ಪ ಕಳುಹಿಸಿದ ಸಂದೇಶ
ಬೆಂಗಳೂರು, ಡಿ 9: ನೂತನ ಕೃಷಿನೀತಿ ವಿರೋಧಿಸಿ ಅನ್ನದಾತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ರಸ್ತೆ ತಡೆ, ರೈಲು ತಡೆ, ಪಾದಯಾತ್ರೆ, ರಾಜಭವನ ಚಲೋ, ಬಾರುಕೋಲು ಚಳುವಳಿ ಮುಂತಾದವು ನಡೆಯುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಕಾರದ ವಿರುದ್ದ ಸದನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಬುಧವಾರ (ಡಿ 9) ಕೂಡಾ ರೈತರ ಪ್ರತಿಭಟನೆಯ ಬಿಸಿ ಜೋರಾಗಿಯೇ ಇತ್ತು. ರೈತ ಮುಖಂಡರನ್ನು ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನಿಸಿದ್ದಾರೆ.
ಜೆಡಿಎಸ್ ಪಕ್ಷ ರೈತರ ಪರವಾಗಿ ಇಲ್ಲ ಎಂದು ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. "ನನ್ನ ಬಗ್ಗೆ ಮಾತನಾಡುವಾಗ ಹುಷಾರ್" ಎಂದು ಎಚ್ಡಿಕೆ ವಾರ್ನಿಂಗ್ ನೀಡಿದ್ದಾರೆ.

ಇವೆಲ್ಲದರ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಹಳೆಯ ಹೋರಾಟದ ಕಾಲದ ಫೋಟೋವೊಂದನ್ನು ಹಾಕಿ ರೈತರಲ್ಲಿ ಮನವಿ ಮಾಡಿದ್ದಾರೆ. ಬಿಎಸ್ವೈ ಮಾಡಿರುವ ಈ ಟ್ವೀಟ್ ಅನ್ನು ಸಾವಿರಾರು ಜನ ಲೈಕ್ ಮಾಡಿದ್ದಾರೆ.
"ಹೋರಾಟದಿಂದಲೇ ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ. ನಾನೂ ಕೂಡ ರೈತನ ಮಗನಾಗಿದ್ದು, ರೈತರ ಸಂಕಷ್ಟ ತಿಳಿದಿದೆ. ಸದಾಕಾಲ ರೈತ ಪರವಾಗಿಯೇ ಇರುತ್ತೇನೆ. ನಮ್ಮ ಅನ್ನದಾತ ರೈತರಿಗೆ ಅನ್ಯಾಯವಾಗಲು ನಾನು ಅವಕಾಶ ನೀಡುವುದಿಲ್ಲ".
"ರೈತರ ಸಂಶಯಗಳನ್ನು ಸರ್ಕಾರ ಪರಿಹರಿಸಲಿದೆ. ನನ್ನ ವಿನಂತಿಯಿಷ್ಟೇ, ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬೇಡಿ"ಎಂದು ತಮ್ಮ ಹಳೆಯ ಕಾಲದ ಫೋಟೋ ಒಂದನ್ನು ಹಾಕಿ ಟ್ವೀಟ್ ಮಾಡಿದ್ದಾರೆ.
"ಹಾರ ಕಟ್ಟಿ ಬೆಳೆ ಬೆಳೆಯೋ ರೈತರು ದೇಶಕ್ಕೂ ಅನ್ನ ಕೊಡುತ್ತಾರೆ ತನ್ನ ಪರಿವಾರಕ್ಕೂ ಅನ್ನ ಕೊಡುತ್ತಾರೆ. ಈ ದೇಶದ ಬೆನ್ನೆಲುಬು ರೈತರು. ಪ್ರಾಮಾಣಿಕವಾಗಿ ದುಡಿದು ತಿನ್ನುವನಂದರೇ ಅದು ರೈತರು, ನಿಮ್ಮ ಇಳಿ ವಯಸ್ಸಿನಲ್ಲೂ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಿ ನೇಕಾರರು, ರೈತರ ಪರವಾಗಿ ಹೋರಾಡಿದ ನಿಮ್ಮ ಹೋರಾಟಕೆ ಜಯವಾಗಲಿ"ಎನ್ನುವ ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ.
"ಹಾವೇರಿಯಲ್ಲಿ ರೈತರಿಗೆ ಗುಂಡಿಕ್ಕಿ ಹೊಡೆಯುವಾಗ ಎಲ್ಲಿ ಹೋಗಿತ್ತು ನಿಮ್ಮ ರೈತರ ಮೇಲಿನ ಕಾಳಜಿ. ಈಗ ದೇಶಾದ್ಯಂತ ರೈತರು ಧರಣಿ ಮಾಡುತ್ತಿದ್ದು ನಿಮ್ಮ ಭಕ್ತರು ಧರಣಿ ನಿರತ ರೈತರಿಗೆ ಭಯೋತ್ಪಾದಕರು ಅನ್ನುತ್ತಿದ್ದಾರೆ ಇದಕ್ಕೆ ನಿಮ್ಮ ಉತ್ತರ?"ಎನ್ನುವ ಟೀಕೆಯೂ ವ್ಯಕ್ತವಾಗಿದೆ.












Click it and Unblock the Notifications