ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಟ್ ಕರ್ಫ್ಯೂ ಯಡವಟ್ಟು: ಗೊಂದಲಮಯ ಸರ್ಕಾರದ ಆದೇಶ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ರಾತ್ರಿ ಕರ್ಫ್ಯೂ ವಿಚಾರದಲ್ಲಿ ಸರ್ಕಾರದ ಪದೇ ಪದೇ ಬದಲಾಗುವ ನಿಯಮಗಳು ಮತ್ತೊಂದು ಹಂತಕ್ಕೆ ತಲುಪಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಜಾರಿಗೆ ತಂದಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈಗ ಸರ್ಕಾರ ಆ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ಗುರುವಾರದಿಂದ ಜಾರಿಯಾಗಬೇಕಿದ್ದ ನೈಟ್ ಕರ್ಪ್ಯೂ ರದ್ದುಗೊಂಡಿದೆ.

ಗುರುವಾರ ರಾತ್ರಿ 11 ಗಂಟೆಯಿಂದ ಜಾರಿಗೆ ಬರಬೇಕಿದ್ದ ರಾತ್ರಿ ಕರ್ಫ್ಯೂವನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹೀಗಾಗಿ ಜಾರಿಗೂ ಮುನ್ನವೇ ರಾತ್ರಿ ಕರ್ಫ್ಯೂ ರದ್ದುಗೊಂಡಿದೆ.

ರಾತ್ರಿ ವೇಳೆ ಜನರ ಓಡಾಟವನ್ನು ನಿರ್ಬಂಧಿಸುವ ನಿಷೇಧಾಜ್ಞೆಯ ನಿರ್ಧಾರ ವ್ಯಾಪಕ ಟೀಕೆಗೆ ಒಳಗಾಗಿತ್ತು. ರಾತ್ರಿ ಮಾತ್ರವೇ ಕೊರೊನಾ ಹರಡುವುದಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದರು. ಇದರಿಂದ ಮೊದಲ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ನಿರ್ಧಾರ ಬದಲಿಸಿಕೊಂಡಿದ್ದ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಯನ್ನು ಒಂದು ದಿನ ಮುಂದೂಡಿತ್ತು. ಬಳಿಕ ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಪ್ರಯಾಣಿಕ ಮತ್ತು ಸರಕು ಸಾಗಾಣಿಕೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಿತ್ತು. ಅದರ ಮರುದಿನವೇ ನೈಟ್ ಕರ್ಪ್ಯೂ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ಮುಂದೆ ಓದಿ.

ಸರ್ಕಾರದ ಹೇಳಿಕೆಯಲ್ಲಿ ಏನಿದೆ?

ಸರ್ಕಾರದ ಹೇಳಿಕೆಯಲ್ಲಿ ಏನಿದೆ?

ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು.

ಕರ್ಫ್ಯೂ ವಾಪಸ್ ತೀರ್ಮಾನ

ಕರ್ಫ್ಯೂ ವಾಪಸ್ ತೀರ್ಮಾನ

ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕರ್ಫ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.

ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಿ

ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಿ

ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಲು ಕೋರಿದೆ.

ನಿಷೇಧಾಜ್ಞೆ ಬೇಕಿಲ್ಲ ಎಂದಿದ್ದರು!

ನಿಷೇಧಾಜ್ಞೆ ಬೇಕಿಲ್ಲ ಎಂದಿದ್ದರು!

ರಾತ್ರಿ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರ ಯಡಬಿಡಂಗಿ ಪ್ರದರ್ಶನ ತೋರಿಸಿದೆ ಎಂಬ ಟೀಕೆಗಳು ಕೇಳಿಬಂದಿವೆ. ಬುಧವಾರ ಬೆಳಿಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾತ್ರಿ ನಿಷೇಧಾಜ್ಞೆ ಜಾರಿಗೆ ತರುವ ಯಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದರು.

ಬುಧವಾರದಿಂದಲೇ ಜಾರಿ ಎಂದರು

ಬುಧವಾರದಿಂದಲೇ ಜಾರಿ ಎಂದರು

ಆದರೆ ಮಧ್ಯಾಹ್ನ ಅಧಿಕಾರಿಗಳು ಮತ್ತು ಸಚಿವರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ, ಬುಧವಾರ ರಾತ್ರಿಯಿಂದಲೇ ಜಾರಿಯಾಗುವಂತೆ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದರು. ಈ ಸಮಯದಲ್ಲಿ ವೈದ್ಯಕೀಯ ವ್ಯವಸ್ಥೆ ಮತ್ತು ತುರ್ತು ವ್ಯವಸ್ಥೆಗಳ ಹೊರತಾಗಿ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಳ್ಳಲಿವೆ ಎಂದು ಹೇಳಿದ್ದರು.

ಬದಲಾದ ನಿಯಮಗಳು

ಬದಲಾದ ನಿಯಮಗಳು

ಆದರೆ ಬುಧವಾರ ಸಂಜೆ ಮತ್ತೊಂದು ಪ್ರಕಟಣೆ ಹೊರಡಿಸಿದ್ದ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು. ಗುರುವಾರ ರಾತ್ರಿ 11 ಗಂಟೆಯಿಂದ ಆರಂಭವಾಗುವಂತೆ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಬಸ್‌ಗಳು, ಆಟೋ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಓಡಾಟ, ಕಂಪೆನಿಗಳ ರಾತ್ರಿ ಪಾಳಿಗಳಿಗೆ ಅನ್ವಯವಾಗುವುದಿಲ್ಲ ಎಂದು ಬದಲಾವಣೆ ಮಾಡಲಾಗಿತ್ತು.

ಬೆಳಿಗ್ಗೆ ಸಮರ್ಥನೆ, ಸಂಜೆ ವಾಪಸ್

ಬೆಳಿಗ್ಗೆ ಸಮರ್ಥನೆ, ಸಂಜೆ ವಾಪಸ್

ರಾತ್ರಿ ಕರ್ಫ್ಯೂ ಜಾರಿಯನ್ನು ಗುರುವಾರ ಬೆಳಿಗ್ಗೆಯಷ್ಟೇ ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತ್ತು. ಯುವಕರು ಬೈಕಲ್ಲಿ ಓಡಾಡುತ್ತಿದ್ದಾರೆ, ಪಾರ್ಟಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ರಾತ್ರಿ ಕರ್ಫ್ಯೂ ಅಗತ್ಯವಾಗಿದೆ ಎಂದು ಹೇಳಿತ್ತು. ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡ ಸುದ್ದಿಗೋಷ್ಠಿ ನಡೆಸಿ ರಾತ್ರಿ ಕರ್ಫ್ಯೂ ಜಾರಿಗೆ ತರಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದರು. ಆದರೆ ಕರ್ಫ್ಯೂ ಜಾರಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ಯೂ ಟರ್ನ್ ತೆಗೆದುಕೊಂಡಿದೆ.

English summary
CM Yediyurappa Decides to withdraw night curfew order before implementation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X