Cauvery Dispute: ಕನ್ನಡಿಗರ ಕೂಗು ರಾಷ್ಟ್ರ ರಾಜಧಾನಿಗೆ ತಲುಪಿದೆ ನೋಡಿ!
ಕಾವೇರಿ ವಿವಾದದ ಕಾವು ಜೋರಾಗಿರುವ ಸಮಯದಲ್ಲೇ ಕರ್ನಾಟಕದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಕ್ಷ ಭೇದ ಮರೆತು ಒಂದಾಗುವ ಸೂಚನೆ ನೀಡಿದ್ದಾರೆ. ಈ ಹೊತ್ತಲ್ಲೇ ರಾಜ್ಯದ ರೈತರ ಹಿತರಕ್ಷಣೆ ಹಾಗೂ ಬೆಂಗಳೂರು & ಮೈಸೂರು ಭಾಗದ ಜನರ ಕುಡಿಯುವ ನೀರಿನ ರಕ್ಷಣೆಗಾಗಿ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೆಜ್ಜೆ ಇಟ್ಟಿದ್ದು, ಕನ್ನಡಿಗರ ಕೂಗು ರಾಷ್ಟ್ರ ರಾಜಧಾನಿ ತಲುಪಿದೆ.
ಕರ್ನಾಟಕದಲ್ಲಿ ಮಳೆ ಬೀಳದೇ ಇದ್ದರೂ ನೀರು ಬಿಡಿ ಬಿಡಿ ಅಂತಾ ಒತ್ತಡ ಹೇರಲಾಗ್ತಿದೆ. ಈ ಕಾರಣಕ್ಕೆ ಕರ್ನಾಟಕ ಸರ್ಕಾರ ಕೂಡ ಒಂದು ಬಾರಿ ನೀರು ಬಿಟ್ಟು ಈಗ ಒಂದು ಹನಿ ನೀರನ್ನೂ ಬಿಡದೆ ಇರಲು ನಿರ್ಧಾರ ಮಾಡಿದೆ. ಆದರೆ ನಮ್ಮ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ನೀಡಬೇಕು ಅಲ್ವಾ? ಪರಿಸ್ಥಿತಿ ತಿಳಿಸದೇ ಇದ್ದರೆ ಕೇಂದ್ರ ಅರ್ಥವಾಗುವುದು ಹೇಗೆ? ಹೀಗಾಗಿ ರಾಜ್ಯ ಸರ್ಕಾರ ಈಗ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸುದೀರ್ಘ ಪತ್ರ ಬರದಿದೆ.

ಕೇಂದ್ರದಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಇನ್ನು ರಾಜ್ಯದ ಕಾವೇರಿ ಕಣಿವೆಯ ಭಯಾನಕ ಪರಿಸ್ಥಿತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ರೈತರ ಕೃಷಿ ಚಟುವಟಿಕೆಗೆ ಹಾಗೂ ಕುಡಿಯಲು ಜನ, ಜಾನುವಾರುಗಳು ಕಾವೇರಿ ನದಿ ನೀರು ಅವಲಂಬಿಸಿದ್ದಾರೆ. ಅವರ ಹಿತಾಸಕ್ತಿಗೆ ಧಕ್ಕೆ ಆಗದಂತೆ ಈ ಆದೇಶವನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಸಿಎಂ ಪತ್ರ ಬರೆದಿದ್ದಾರೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ಕೆಆರ್‌ಎಸ್ ಹಾಗೂ ಕಬಿನಿ ಡ್ಯಾಂನಿಂದ, ಮುಂದಿನ 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ನೀಡಿದ ಆದೇಶವನ್ನು ತಿರಸ್ಕರಿಸಿದೆ ರಾಜ್ಯ ಸರ್ಕಾರ.
ಅಲ್ಲದೆ ರಾಜ್ಯದ ಈ ಮನವಿ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರಕ್ಕೆ ವರ್ಗಾಯಿಸಿ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಲು ಸೂಚಿಸಬೇಕು ಎಂದು ಸಿಎಂ ಪತ್ರದಲ್ಲಿ ಕೋರಲಾಗಿದೆ. ಹಾಗೇ ಇದು ಸಂಕಷ್ಟದ ವರ್ಷವಾಗಿರುವ ಹಿನ್ನೆಲೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವುದು, ರೈತರು ಮತ್ತು ಜನರ ಮೇಲೆ ಭಾರಿ ಹೊರೆ ಮಾಡಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರಿಗೆ ಬರೆದ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜೈಪುರದಲ್ಲಿ ಡಿಸಿಎಂ ಡಿಮ್ಯಾಂಡ್?
ಒಂದು ಕಡೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಮಧ್ಯೆ ಜೈಪುರದಲ್ಲಿ ನಾಳೆ ನಡೆಯುವ ಅಣೆಕಟ್ಟು ಸುರಕ್ಷಣಾ ಸಭೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಗಮಿಸಲಿದ್ದು, ಈ ವೇಳೆ ಕಾವೇರಿ ನೀರು ಹಂಚಿಕೆ ಬಗ್ಗೆ ರಾಜ್ಯದ ವಸ್ತುಸ್ಥಿತಿ ವಿವರಿಸಲಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ಮಾಹಿತಿ ನೀಡಿದ್ದರು.
ನೀರು ಬಿಡದಿರಲು ಸರ್ಕಾರದ ನಿರ್ಧಾರ
ಜೈಪುರದ ಸಭೆಗೆ ಎಲ್ಲಾ ರಾಜ್ಯಗಳ ನೀರಾವರಿ ಸಚಿವರು ಬರುತ್ತಾರೆ. ನಮ್ಮ ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ನೀರಾವರಿ ಸಚಿವರಿಗೆ ವಾಸ್ತವ ಮನವರಿಕೆ ಮಾಡಿಕೊಡುತ್ತೇವೆ. ಎಂದು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ ರಾಜ್ಯ ಸಾಕಷ್ಟು ನೀರು ತಮಿಳುನಾಡಿಗೆ ಬಿಟ್ಟಿದ್ದರೂ, ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಸತತ 15 ದಿನ ಕಾಲ ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿದ ಹಿನ್ನೆಲೆ ಕರ್ನಾಟಕ ಸರ್ಕಾರ ಕೂಡ ಗಟ್ಟಿ ನಿರ್ಧಾರ ಕೈಗೊಂಡಿದೆ. ನೀರು ಬಿಡಬಾರದು ಎಂದು ನಿರ್ಧರಿಸಿದೆ.
ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ರೆ ಮುಂದಿನ ದಿನಗಳಲ್ಲಿ ಕರ್ನಾಟಕ & ತಮಿಳುನಾಡು ನಡುವೆ ದೊಡ್ಡ ಕಿರಿಕ್ ನಡೆದು, ಕಾವೇರಿ ಕಿಚ್ಚು ದೊಡ್ಡದಾಗುವ ಆತಂಕ ಮನೆಮಾಡಿದೆ. ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಪ್ರತಿ ಬಾರಿಯೂ ಇದೇ ರೀತಿ ಎರಡೂ ರಾಜ್ಯಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಹೀಗಾಗಿ ಮತ್ತೊಮ್ಮೆ ಪರಿಸ್ಥಿತಿ ಸೂಕ್ಷ್ಮವಾಗಿದೆ.












Click it and Unblock the Notifications