ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡ್ತಾರೆ: ಬಿಎಸ್ವೈ ಭವಿಷ್ಯ
ಗುಲ್ಬರ್ಗಾ, ಅ.9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ, ಇರುವಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾರೈಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಮಾರ್ಕ್ಸ್ ನೀಡಿ ಶುಭ ಹಾರೈಸುವ ಮಾಜಿ ಮುಖ್ಯಮಂತ್ರಿಗಳ ಸಾಲಿಗೆ ಯಡಿಯೂರಪ್ಪ ಕೂಡಾ ಸೇರಿದ್ದಾರೆ.
ಗುಲ್ಬರ್ಗಾಗೆ ಭೇಟಿ ನೀಡಿರುವ ಯಡಿಯೂರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಶಾಸಕರು ದಿಗ್ವಿಜಯ್ ಸಿಂಗ್ ಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷದವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಎ ಹಾಗೂ ಬಿ ಟೀಂ ಗಳಾಗಿ ಇಬ್ಭಾಗವಾಗಿದೆ. ಗುಂಪುಗಾರಿಕೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯಿಂದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಲೋಕಸಭಾ ಚುನಾವಣೆಯ ನಂತರ ರಾಜಕೀಯ ಸ್ಥಿತಿ ಬದಲಾಗಲಿದೆ. ಸಿದ್ದರಾಮಯ್ಯ ಸಿ.ಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅಧಿಕಾರದಲ್ಲಿರುವಷ್ಟು ದಿನವಾದರೂ ಒಳ್ಳೆಯ ಕೆಲಸ ಮಾಡಲಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಯಡಿಯೂರಪ್ಪ ನೀಡಿರುವ ಈ ಹೇಳಿಕೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ. ಕೇಂದ್ರದಲ್ಲಿ ದುರಾಡಳಿತ ನೀಡುವ ಮೂಲಕ, ಕೆಟ್ಟ ಹೆಸರು ಪಡೆದಿರುವ ಕಾಂಗ್ರೆಸ್ ಸರ್ಕಾರ, ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ನಿರೀಕ್ಷಿತ ಸಂಸದ ಸ್ಥಾನಗಳನ್ನು ಗೆಲ್ಲಿಸಿಕೊಡುವಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ವಿಫಲವಾದರೆ ಕೇಂದ್ರ ಕಾಂಗ್ರೆಸ್ ನ ವೈಫಲ್ಯಕ್ಕೆ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಹೊಣೆ ಮಾಡಿ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಲ್ಲಿ ಮೂಲ ಹಾಗೂ ವಲಸಿಗರೆಂಬ ಭಿನ್ನಮತ ಲೋಕಸಭಾ ಚುನಾವಣೆ ಸೋಲಿನ ಪರಿಣಾಮ ಈ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಗಳೂ ದಟ್ಟವಾಗಿದೆ.

ಯಡಿಯೂರಪ್ಪ ಹೇಳಿಕೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಇದರ ಹೊಣೆ ಸಿದ್ದರಾಮಯ್ಯ ಹೊರ ಬೇಕಾಗುತ್ತದೆ. ಸಿದ್ದರಾಮಯ್ಯ ಸೀಟು ಅಲುಗಾಡುತ್ತಿದೆ

ಡಿವಿಎಸ್ ಭವಿಷ್ಯ
ಪ್ರಸವ ವೇದನೆ ಮತ್ತು ಬಾಲಗ್ರಹ ಪೀಡೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೆಚ್ಚುದಿನ ಬಾಳುವುದು ಕಷ್ಟಸಾಧ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಸುಮಾರು 9 ವರ್ಷಗಳ ನಂತರ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಒಂದು ತಿಂಗಳು ಕಳೆಯುವುದರೊಳಗೆ ಸುಸ್ತಾಗಿದೆ. ಸೂಪರ್ ಫಾಸ್ಟ್ ವೇಗದಲ್ಲಿ ಎಲ್ಲವನ್ನೂ ಮಾಡಿ ಮುಗಿಸುವ ಆತುರದಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರ ಅವನತಿ ಹಾದಿ ಹಿಡಿದಿದೆ
ಎಚ್ಡಿಕೆ ಪ್ರತಿಕ್ರಿಯೆ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಲಿ. ಇಲ್ಲವಾದಲ್ಲಿ ಅಸಮಾಧಾನಗೊಂಡಿರುವ ಶಾಸಕರ ಸಂಖ್ಯೆ 20ರಿಂದ 120ಕ್ಕೆ ಏರಿಕೆಯಾಗಬಹುದು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಮುಖ್ಯಮಂತ್ರಿಗಳು ದರ್ಪ, ದುರಹಂಕಾರವನ್ನು ಬಿಟ್ಟು, ಅಧಿಕಾರ ಶಾಶ್ವತವಲ್ಲ ಎಂಬುದನ್ನು ತಿಳಿದುಕೊಳ್ಳಲಿ ಎಂದರು. ಮುಖ್ಯಮಂತ್ರಿಗಳು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ರೀತಿಯಲ್ಲಿ ಈಗಿನಂತೆ ಮುಂದುವರೆದರೆ ಸಿದ್ದರಾಮಯ್ಯನವರು ಕುರ್ಚಿಯಲ್ಲಿ ಉಳಿಯುವುದು ಕಷ್ಟ
ಶೆಟ್ಟರ್ ಚಾಲೆಂಜ್
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 3ತಿಂಗಳು ಕಳೆದರೂ ಸಿದ್ದರಾಮಯ್ಯ, ಒಮ್ಮೆಯೂ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿಲ್ಲ, ಈ ಮೂಲಕ ತಾವು ಕೂಡ ಮೂಢನಂಬಿಕೆಯ ದಾಸರು ಎಂದು ಸಾಬೀತು ಮಾಡಿದ್ದಾರೆ ಎಂದು ಮಾಜಿ ಸಿಎಂ ಶೆಟ್ಟರ್ ಚಾಲೆಂಜ್ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ 43 ತಾಲೂಕುಗಳ ಘೋಷಣೆಯನ್ನು ರದ್ದು ಪಡಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಆಡಳಿತ ವಿಕೇಂದ್ರಿಕರಣದ ದೃಷ್ಟಿಯಿಂದ ಹೊಸ ತಾಲೂಕುಗಳ ಘೋಷಣೆ ಉತ್ತಮವಾಗಿದೆ. ಈ ಹಿಂದಿನ ಸರ್ಕಾರಗಳ ಜನಪರ ಯೋಜನೆಗಳನ್ನು ರದ್ದುಗೊಳಿಸಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಶೆಟ್ಟರ್ ದೂರಿದ್ದರು. ನಂತರ ಚಾಲೆಂಜ್ ಮಾಡಿದ್ದರು.
ಈಗ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿಕೊಟ್ಟು ಚಾಲೆಂಜ್ ಗೆದ್ದಿದ್ದಾರೆ. ಆದರೆ, ಅಧಿಕಾರ ಉಳಿಸಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications