ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬನಿ ಮಿಡಿಯುತ್ತಲೇ ಜನತೆಗೆ ಧನ್ಯವಾದ ಅರ್ಪಿಸಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 03 : ರಾಕೇಶ್ ಸಿದ್ದರಾಮಯ್ಯ ಸಾವಿನ ಸಮಯದಲ್ಲಿ ಬೆಂಬಲಕ್ಕೆ ನಿಂತು, ನೈತಿಕವಾಗಿ ಶಕ್ತಿ ತುಂಬಿದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. 'ಬೆಳೆದು ನಿಂತ ಮಕ್ಕಳು ತಮ್ಮ ಕಣ್ಣೆದುರೇ ಅಗಲಿಹೋಗುವ ಸ್ಥಿತಿ ಯಾವ ತಂದೆ-ತಾಯಿಗೂ ಬಾರದಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ' ಎಂದು ಅವರು ಹೇಳಿದ್ದಾರೆ.

ಮಂಗಳವಾರ ಸಿದ್ದರಾಮಯ್ಯ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 'ಇಡೀ ರಾಜ್ಯದ ಜನತೆ ಮತ್ತು ಹೊರರಾಜ್ಯಗಳ ಜನರೂ ಸಹ ನಮ್ಮ ದುಃಖದಲ್ಲಿ ಭಾಗಿಯಾಗಿರುವುದು ನನ್ನ ಅನುಭವಕ್ಕೆ ಬಂದಿದೆ. ಈ ಎಲ್ಲರಿಗೂ ಚಿರರುಣಿಯಾಗಿದ್ದೇನೆ' ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಬರೆದ ಪತ್ರದ ಇಲ್ಲಿದೆ......[ಚಿತ್ರಗಳು : ರಾಕೇಶ್ ಸಿದ್ದರಾಮಯ್ಯಗೆ ಅಂತಿಮ ನಮನ]

siddaramaiah

ನನ್ನ ಹಿರಿಮಗ ರಾಕೇಶ್ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾಣದೇ ತೀರಿಕೊಂಡದ್ದು ನನಗೆ ಮತ್ತು ನನ್ನ ಕುಟುಂಬವರ್ಗಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ರಾಕೇಶ್ ತನ್ನ ಪತ್ನಿ, ಇಬ್ಬರು ಮಕ್ಕಳು ಕುಟುಂಬಸ್ಥರನ್ನು ಮಾತ್ರವಲ್ಲ ಅವನನ್ನು ಪ್ರೀತಿಸುತ್ತಿದ್ದ ಲಕ್ಷಾಂತರ ಹಿತೈಷಿಗಳನ್ನು ಅಗಲಿಹೋಗಿದ್ದಾನೆ. ನಮ್ಮ ಕುಟುಂಬಕ್ಕೆ ಈ ಆಘಾತದಿಂದ ಹೊರಬರಲು ಬಹಳ ಕಾಲವೇ ಬೇಕಾಗಬಹುದು.[ರಾಕೇಶ್ ಸಿದ್ದರಾಮಯ್ಯ ಇನ್ನು ನೆನೆಪು ಮಾತ್ರ]

ವೈಯಕ್ತಿಕವಾಗಿ ನನಗೆ ನನ್ನ ಮಗ ರಾಕೇಶನ ಅಗಲಿಕೆಯನ್ನು ಸಹಿಸಿಕೊಳ್ಳಲು ಅತ್ಯಂತ ಕಷ್ಟವಾಗಿದೆ. ರಾಕೇಶ‍‍ ನನ್ನು ದೂರದ ಬೆಲ್ಜಿಯಂ ದೇಶದ ಬ್ರಸೆಲ್ಸ್ ನ ಯೂನಿವರ್ಟಿಸಿ ಹಾಸ್ಪಿಟಲ್ ನಲ್ಲಿ ತೀವ್ರನಿಘಾ ಘಟಕದಲ್ಲಿ ನಾವು ಆರೈಕೆ ಮಾಡುತ್ತಿದ್ದಾಗ ರಾಜ್ಯದ ಜನತೆ ಜಾತಿ, ಧರ್ಮ, ಪಕ್ಷ, ಪಂಥ ಎಂಬ ಭೇದ ಮಾಡದೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ.[ರಾಕೇಶ್ ನನ್ನು ರಾಜಕೀಯಕ್ಕೆ ಕರೆತರುವುದು ಸಿದ್ದರಾಮಯ್ಯ ಕನಸಾಗಿತ್ತು]

ನಮ್ಮ ಕುಟುಂಬ ಕಡು ದು:ಖದಲ್ಲಿರುವಾಗ ನಾಡಿನ ಜನತೆ ತೋರಿದ ಪ್ರೀತಿ, ಕಾಳಜಿ ಮತ್ತು ನೀಡಿದ ಮಾನಸಿಕ ಸ್ಥೈರ್ಯ ನನ್ನನ್ನು ಮೂಕನನ್ನಾಗಿ ಮಾಡಿದೆ. ಹಲವಾರು ಹಿತೈಷಿಗಳು ಮಂದಿರ, ಮಸೀದಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇಡೀ ಕರ್ನಾಟಕದ ಜನತೆಯನ್ನು ನನ್ನ ಕುಟುಂಬವೆಂದು ಬಗೆದಿರುವ ನನ್ನನ್ನು ಮತ್ತು ನನ್ನ ಕುಟುಂಬವನ್ನು ತಮ್ಮ ಕುಟುಂಬದ ಭಾಗವೆಂಬಂತೆ ಕಾಳಜಿ ತೋರಿದ ರಾಜ್ಯದ ಸಹೃದಯಿಗಳ ಈ ಪ್ರೀತಿಯನ್ನು ನಾನೆಂದೂ ಮರೆಯಲಾರೆ.

ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಹೀಗೆ ಆಸ್ಪತ್ರೆಯಲ್ಲಿ ತಮ್ಮ ಮಗನ ಆರೈಕೆಯಲ್ಲಿದ್ದಾರೆ ಎಂಬ ಸುದ್ದಿ ತಿಳಿದೊಡನೆಯೇ ವಿಜಯೇಂದ್ರ ಎಂಬ ಬೆಂಗಳೂರು ಮೂಲದ ಬೆಲ್ಜಿಯಂ ನಿವಾಸಿ ಯುವಕ ಮತ್ತು ಅವರ ಪತ್ನಿ ತಾವಾಗಿ ಬಂದು ನಮಗೆ ನೀಡಿದ ನೆರವನ್ನು ನಾನು ಮರೆಯಲಾರೆ. ಅವರು ತಮ್ಮ ಮನೆಯಿಂದ ಅಡುಗೆಯನ್ನು ಸಹ ಮಾಡಿಕೊಂಡು ಬಂದು ನಮಗೆ ನೀಡುತ್ತಿದ್ದುದು ನನಗೆ ಹೃದಯ ತುಂಬಿ ಬಂದ ಕ್ಷಣವಾಗಿತ್ತು. ವಿಜೇಂದ್ರ ಅವರ ಈ ಅಭಿಮಾನ, ಪ್ರೀತಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ಬಹು ಅಂಗಾಗಗಳ ವಿಫಲತೆಯ ಕಾರಣದಿಂದ ರಾಕೇಶ್ ನನ್ನು ನಾವು ಉಳಿಸಿಕೊಳ್ಳಲಾರದೇ ಹೋದೆವು. ನನ್ನ ಮಗನ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದ ಮೇಲೆ, ಅಂತ್ಯಸಂಸ್ಕಾರಕ್ಕೆ ಮುಂಚಿನ ಗಳಿಗೆಗಳನ್ನು ಯಾವತ್ತೂ ನನ್ನ ಜೀವನದಲ್ಲಿ ಮರೆಯಲಾರೆ.

ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಬಂದು ರಾಕೇಶನ ಅಂತಿಮ ದರ್ಶನ ಮಾಡಿಕೊಂಡು ಹೋಗಿದ್ದಾರೆ. ಗಣ್ಯರು, ಹಿರಿಯರು, ಕಿರಿಯರು, ಮಕ್ಕಳು, ವೃದ್ಧರು ಲಕ್ಷಾಂತರ ಜನರು ಈ ಸಂದರ್ಭದಲ್ಲಿ ರಾಕೇಶ್ ನನ್ನು ಕೊನೆಯ ಬಾರಿಗೆ ಬೀಳ್ಕೊಡುವಾಗ ನನಗೆ 'ಮನುಷ್ಯತ್ವ'ದ ಸಾಕ್ಷಾತ್ ದರ್ಶನವಾಯಿತು. ಪಕ್ಷ, ಪಂಗಡ, ಜಾತಿ ಮತ ಎಲ್ಲವನ್ನೂ ಮೀರಿ ಸಾಗರದೋಪಾದಿಯಲ್ಲಿ ಅಲ್ಲಿ ನೆರೆದಿದ್ದ ಜನರು ಮಗ ರಾಕೇಶನ ಮೇಲೆ, ನಮ್ಮ ಮೇಲೆ ತೋರಿದ ಪ್ರೀತಿ ನನ್ನನ್ನು ಮೂಕನನ್ನಾಗಿಸಿದೆ. ಅವರೆಲ್ಲರಿಗೂ ನಮ್ಮ ಕುಟುಂಬ ಕೃತಜ್ಞವಾಗಿದೆ. ಈ ಸಂದರ್ಭದಲ್ಲಿ ಯಾರಿಗಾದರೂ ಸಣ್ಣಪುಟ್ಟ ಅನಾನೂಕೂಲತೆಗಳು ಆಗಿದ್ದಲ್ಲಿ ಅದಕ್ಕಾಗಿ ನಾನು ವಿಷಾದಿಸುತ್ತೇನೆ.

ಮಾನ್ಯ ರಾಜ್ಯಪಾಲರಾದ ವಜುಭಾಯಿ ವಾಲಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸದಾನಂದಗೌಡ, ಎಸ್.ಎಂ.ಕೃಷ್ಣ, ಎಲ್ಲಾ ಸಚಿವ ಸಹೋದ್ಯೋಗಿಗಳು ಎಲ್ಲಾ ಪಕ್ಷಗಳ ಅನೇಕ ಶಾಸಕರು, ಸಂಸದರು, ಹಲವು ಮಠಾಧೀಶರು, ಸಾಹಿತಿಗಳು, ಪತ್ರಕರ್ತರು ಈ ಸಂದರ್ಭದಲ್ಲಿ ಜತೆಗಿದ್ದು ಸಂತೈಸಿದರು.

ಅಲ್ಲದೇ ಅನೇಕ ಗಣ್ಯಮಾನ್ಯರು ಮಾಧ್ಯಮಗಳ ಮೂಲಕ ಟ್ವಿಟರ್ ನಂತಹ ಸಾಮಾಜಿಕ ಮಾಧ‍್ಯಮಗಳ ಮೂಲಕವೂ ತಮ್ಮ ಸಂತಾಪ ತಿಳಿಸಿದ್ದಾರೆ. ಇಡೀ ರಾಜ್ಯದ ಜನತೆ ಮತ್ತು ಹೊರರಾಜ್ಯಗಳ ಜನರೂ ಸಹ ಈ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿರುವುದು ನನ್ನ ಅನುಭವಕ್ಕೆ ಬಂದಿದೆ. ಈ ಎಲ್ಲರಿಗೂ ಚಿರರುಣಿಯಾಗಿದ್ದೇನೆ.

ಬೆಳೆದು ನಿಂತ ಮಕ್ಕಳು ತಮ್ಮ ಕಣ್ಣೆದುರೇ ಅಗಲಿಹೋಗುವ ಸ್ಥಿತಿ ಯಾವ ತಂದೆತಾಯಿಗೂ ಬಾರದಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ.....
English summary
'I pray that no parent should lose their child as I have lost' said, Karnataka Chief Minister Siddaramaiah in a press release on Tuesday, August 2, 2016. Siddaramaiah also thanked the people for their moral support in the time of his elder son Rakesh death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X