ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸಂಕ್ರಾಂತಿ
ಬೆಂಗಳೂರು, ಜ, 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ದೆಹಲಿಯಲ್ಲಿ ಸಂಕ್ರಾಂತಿ ಆಚರಿಸುವ ಯೋಗ. ಸಿಎಂ ಸಿದ್ದರಾಮಯ್ಯ ಅವರಿಗೆ ಕೂಡಲೇ ದೆಹಲಿಗೆ ಬರುವಂತೆ ಸೋನಿಯಾ ಗಾಂಧಿ ಬುಲಾವ್ ನೀಡಿದ್ದಾರೆ.
ಜನವರಿ 15 ರಂದು ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಪಕ್ಷ ಎದುರಿಸುತ್ತಿರುವ ಸವಾಲುಗಳು ಮತ್ತು ಮುಂದೆ ನಡೆದುಕೊಳ್ಳಬೇಕಾದ ರೀತಿ, ಸಂಘಟನೆ ಎಲ್ಲದರ ಬಗ್ಗೆ ಚರ್ಚೆ ನಡೆಯಲಿದೆ.

ಅರ್ಕಾವತಿ ಪ್ರಕರಣ ವಿಚಾರಣೆ ಸಂಬಂಧ ಬಿಜೆಪಿಯು ರಾಜ್ಯಪಾಲರ ಬಳಿ ಪ್ರಾಸಿಕ್ಯೂಶನ್ ಗೆ ಅನುಮತಿ ಕೋರಿದೆ. ಈ ಬಗ್ಗೆ ಮುಖ್ಯಮಂತ್ರಿ ಹೈ ಕಮಾಂಡ್ ಗೆ ಸಂಪೂರ್ಣ ವಿವರಣೆ ನೀಡಲಿದ್ದಾರೆ. ಸಿಎಂ ಜತೆ ಗೃಹ ಸಚಿವ ಕೆ.ಜೆ.ಜಾರ್ಜ್ ಕೂಡ ದೆಹಲಿಗೆ ಪಯಣ ಬೆಳೆಸಲಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಇತ್ತೀಚೆಗೆ ದಾಖಲಾಗುತ್ತಿರುವ ಹೇಳಿಕೆಗಳೇ ಕಾರಣ. ಅತ್ತ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ಕ್ರಮಗಳನ್ನು ಖಂಡಿಸುತ್ತಿದ್ದರೆ ಇತ್ತ ಸಚಿವ ರೋಶನ್ ಬೇಗ್ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆಯೂ ಕಾಂಗ್ರೆಸ್ ಅಧಿನಾಯಕರು ವರದಿ ಕೇಳಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications