ಆ ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ: ಸಿಎಂ ಸಿದ್ದರಾಮಯ್ಯ
ರಾಜ್ಯದ ಪ್ರಭಾವಿ ರಾಜಕಾರಣಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಭೂಗತಲೋಕದ ಕುಖ್ಯಾತ ರೌಡಿ ಗುಂಪಿನಿಂದ ಜೀವ ಬೆದರಿಕೆ ಇತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ವಿಚಾರ ರಿವೀಲ್ ಮಾಡಿದ್ದಾರೆ. ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಇದೇ ಕುರುಬರ ಸಂಘದ ವಿಚಾರದಲ್ಲಿ ತಲೆ ಹಾಕಬಾರದು ಎಂದು ಕುಖ್ಯಾತ ರೌಡಿ ಗುಂಪು ಜೀವ ಬೆದರಿಕೆ ಹಾಕಿದ್ದ ವಿಚಾರವನ್ನು ವೇದಿಕೆಯಲ್ಲಿ ಹೇಳಿದ್ದಾರೆ.
ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ ಬೆದರಿಕೆ ಇತ್ತು. ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ನನಗೆ ಜೀವ ಬೆದರಿಕೆ ಇತ್ತು. ಇದಕ್ಕೆಲ್ಲ ನಾನು ಹೆದರಲಿಲ್ಲ. ಆದರೂ ನಾನು ಹೆದರದೆ ಗ್ರಾಮೀಣ ಭಾಗದ ಸಂಘದ ನಿರ್ದೇಶಕರ ಬೆಂಬಲದಲ್ಲಿ ದಾವಣಗೆರೆಯ ಮಲ್ಲಪ್ಪ ಅವರನ್ನು ರೌಡಿ ಪುಟ್ಟಸ್ವಾಮಿ ವಿರುದ್ಧ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿದೆ. ಪುಟ್ಟಸ್ವಾಮಿ ನ್ಯಾಯಾಲಯಕ್ಕೆ ಹೋದರೂ ತೀರ್ಪು ನಮ್ಮ ಪರವಾಗಿಯೇ ಬಂತು. ಹೀಗೆ ಸಂಘವನ್ನು ನಾನು ಉಳಿಸಿದ್ದೆ ಎಂದು ಆ ದಿನಗಳನ್ನು ನೆನೆದಿದ್ದಾರೆ.

ಬಳಿಕ ನನ್ನ ಹಳೆಯ ಕಾರಿನಲ್ಲಿ ಇಡೀ ರಾಜ್ಯ ಸುತ್ತಿ ಕುರುಬ ಸಮಾಜವನ್ನು ಸಂಘಟಿಸಿದೆ. ತಾರಾಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದ್ದು ನಾನೇ. ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಹೀಗೆ ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಮಾಡಿದ್ದೇನೆ ಎನ್ನುವ ಚರಿತ್ರೆಯನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರುಪೀಠ ನಾನು ಮಾಡಿದ್ದು ಎಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸದೇ ಹೋಗಿದ್ದರೆ ನಾನು ವಕೀಲನೂ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಬಳಿಕ ಪ್ರೊ.ನಂಜುಂಡಸ್ವಾಮಿ ಅವರ ಕಾರಣದಿಂದ ರಾಜಕೀಯಕ್ಕೆ ಬಂದೆ. ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದಿದ್ದಾರೆ.
ಈ ಇತಿಹಾಸ ಗೊತ್ತಿದ್ದವರು ಬಹಿರಂಗವಾಗಿ ಮಾತನಾಡಬೇಕಿತ್ತು. ಅವರು ಯಾರೂ ಮಾತನಾಡದ ಕಾರಣಕ್ಕೆ, ನಾನು ಮಾತಾಡಬಾರದು ಅಂದುಕೊಂಡಿದ್ದವನು ಎಲ್ಲವನ್ನೂ ಮಾತಾಡಬೇಕಾಗಿ ಬಂತು. ಯಾರು ಮಾತಾಡಲಿ, ಬಿಡಲಿ ಇದು ಸತ್ಯ. ಇದು ಇತಿಹಾಸ. ಒಟ್ಟಿನಲ್ಲಿ ಸಮಾಜದ ಸಂಘಟನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠವನ್ನು ಸ್ಥಾಪಿಸಿದ್ದು ನಾನು. ನಾನು ಮೊದಲಿಂದಲೂ ಸನಾತನವಾದಿ ಆರ್.ಎಸ್.ಎಸ್‌ಗೆ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಮೌಢ್ಯಕ್ಕೆ ವಿರುದ್ಧವಾಗಿ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications