Siddaramaiah : ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ: ಸಿದ್ದರಾಮಯ್ಯ ರಿಯಾಕ್ಷನ್
ದಾವಣಗೆರೆ, ಡಿಸೆಂಬರ್ 26: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು (ಶುಕ್ರವಾರ) ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಕಾಂಗ್ರೆಸ್ ನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಇಂದು ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ನುಡಿನಮನ ಕಾರ್ಯಕ್ರಮದಲ್ಲಿ ಭಾಗಿ
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು, ಶಾಸಕರಾಗಿದ್ದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿ, ಸಾರ್ವಜನಿಕರ ಅಹವಾಲು ಪಡೆದರು. ಬಳಿಕ ಶಾಮನೂರು ಶಿವಶಂಕರಪ್ಪ ಅವರ ಸಮಾದಿಗೆ ಪುಷ್ಪನಮನ ಸಲ್ಲಿಸಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರೆನಿಸಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡಂತಹ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗೀ ಸುಧೀರ್ಘ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಜನ್ಮದಿನಾಚರಣೆಯಲ್ಲಿ ಹಾಗೂ ದಾಲ್ ಮಿಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು, ಶ್ರೀಯುತರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಿತ್ತು. ಅವರ ಅಗಲಿಕೆಯಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಅತ್ಯಂತ ಕ್ರೀಯಾಶೀಲರಾಗಿದ್ದರು ಎಂದರು.
ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು. ಬಿಜಾಪುರದ ಅಕ್ಕಮಹಾದೇವಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ಬಸವಣ್ಣನವರ ಛಾಯಾಚಿತ್ರ ಕಡ್ಡಾಯಗೊಳಿಸುವ ತೀರ್ಮಾನವನ್ನು ಅಭಿನಂದಿಸಲು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ, ಬಾಳೆಹೊನ್ನೂರು ರಂಭಾಪುರಿ ಶ್ರೀಗಳಾದ ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳು, ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು, ದಾವಣಗೆರೆ ಅನುಭವ ಮಂಟಪದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಗಳು, ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications