NPS TO OPS: ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಭರವಸೆಯನ್ನ ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ, ತಾಲ್ಲೂಕು ಶಾಖೆಗಳ ನಿರ್ದೇಶಕರ ಪದಾಧಿಕಾರಿಗಳ ಸಮಾವೇಶದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ನೌಕಕರರು ಹಲವು ಬೇಡಿಕೆ ನೀಡಿದ್ದಾರೆ. ಸರ್ಕಾರಿ ನೌಕರರ ಮಹಾ ಸಮ್ಮೇಳದಲ್ಲಿ ನೀಡಲಾಗಿದ್ದ ಭರವಸೆಯಂತೆ ರಚಿಸಲಾಗಿದ್ದ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಸಮಿತಿಯ ಅಂತಿಮ ಸಭೆ ನಡೆಸಿದ್ದು, ಶೀಘ್ರದಲ್ಲಿ ವರದಿ ಪಡೆದು, ಸಮಿತಿ ಕೊಟ್ಟ ವರದಿಯನ್ನ ಪರಿಶೀಲಿಸಿ, ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ 1 ಕೋಟಿ ರೂ. ಸಾಲಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದ್ದು, ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಲಾಗುವುದು. ಸರ್ಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬೇಕು. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಹೊಸ ಪಿಂಚಣಿ ಯೋಜನೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಪ್ರಣಾಳಿಕೆಯನುಸಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಅಧ್ಯಯನ ಸಮಿತಿ ವರದಿ ಬಳಿಕ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 2006 ರ ಏಪ್ರಿಲ್ 1ರ ನಂತರ ನೇಮಕವಾಗಿರುವವರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ಸರ್ಕಾರಿ ನೌಕರರ ಬೇಡಿಕೆಯ ಸಾಧಕ-ಬಾಧಕಗಳ ಅಧ್ಯಯನಕ್ಕೆ ಸಮಿತಿಯನ್ನು ರಚಿಸಲಾಗಿದೆ. ಅದು ಕೊನೆಯ ಹಂತದ ಸಭೆ ನಡೆಸಿದೆ. ಅದೇ ರೀತಿ 2015 ರಲ್ಲಿ ನಗದು ರಹಿತ ಜ್ಯೋತಿ ಸಂಜೀವಿನಿ ಯೋಜನೆಯನ್ನು 7 ಗಂಭೀರ ಕಾಯಿಲೆಗಳಿಗೆ ಅನುಷ್ಠಾನಕ್ಕೆ ತರಲಾಗಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದು, ಶೀಘ್ರವಾಗಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಮಂಡಿ ನೋವಿನಿಂದ ನಾನು ಸಮಾವೇಶಕ್ಕೆ ಬರಲು ಆಗಿಲ್ಲ. ನಾನು ನಿಮ್ಮ ಸಮಾವೇಶ ಯಶಸ್ವಿಯಾಗಲಿ ಎಂದು ಆರೈಸುತ್ತೇನೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಈ ಸಮಾರಂಭಕ್ಕೆ ಹಾಜರಾಗಿದ್ದಾರೆ. 2018 ರಲ್ಲಿ ಆರನೇ ವೇತನ ಆಯೋಗವನ್ನ ನಮ್ಮ ಸರ್ಕಾರ ಜಾರಿಗೆ ತಂದಿದೆ. ಆ ಸಂದರ್ಭದಲ್ಲಿ 30% ವೇತನ ಹೆಚ್ಚಳ ಮಾಡಿದ್ದೇವೆ, ಅದು ಜಾರಿಗೆ ಸಹ ಮಾಡಿದ್ದೇವೆ. 2024 ರಲ್ಲಿ 7 ನೇ ವೇತನ ಆಯೋಗವನ್ನ ಜಾರಿಗೆ ತಂದು 27.5% ವೇತನ ಹೆಚ್ಚಳ ಮಾಡಿದ್ದೇವೆ. ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಜೊತೆಗೆ ನೌಕರರ ಹಿತಾಸಕ್ತಿ ರಕ್ಷಿಸುವಂತಹ ಯೋಜನೆಗಳನ್ನ ಜಾರಿಗೆ ತರುವ ಉದ್ದೇಶದಿಂದ ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, ಶೀಘ್ರದಲ್ಲಿ ಸರ್ಕಾರದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications