ಹೈಕಮಾಂಡ್‌ನಿಂದ ಭರ್ಜರಿ ಗುಡ್‌ನ್ಯೂಸ್ ಎಂದ ಸಿಎಂ; ದೆಹಲಿಯಿಂದ ಸುಳಿವು ಕೊಟ್ಟಿದ್ದೇನು?
ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಿಂದ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ನವದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಿಗಮ-ಮಂಡಳಿಗಳಿಗೆ ನೇಮಕ ಸಂಬಂಧ ನಾನು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಭಿಪ್ರಾಯವನ್ನು ನೀಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳಲಿದ್ದು, ವಿಧಾನ ಪರಿಷತ್ತಿಗೆ ನಾಮನಿರ್ದೇಶನವು ವಿಧಾನ ಮಂಡಲದ ಅಧಿವೇಶನಕ್ಕೆ ಮುನ್ನವೇ ಆಗಬಹುದು ಎಂದು ಮಹತ್ವದ ಸಂದೇಶ ರವಾನಿಸಿದ್ದಾರೆ.
ಭಾರತ ಸರ್ಕಾರ ಯೂರಿಯಾ, ಮತ್ತಿತರ ರಸಗೊಬ್ಬರಗಳನ್ನು ಎಲ್ಲ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ. ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರ ಬಳಸುತ್ತಿದ್ದಾರೆ. ನಮ್ಮ ಬಳಿ ರಸಗೊಬ್ಬರವಿಲ್ಲ ಎಂದೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ ಎಂದು ಹೇಳಿದ್ದಾರೆ.

ಮಹದಾಯಿಗೆ ಪರಿಸರ ಒಪ್ಪಿಗೆ ಸಿಗಬೇಕಷ್ಟೇ!
ಮಹದಾಯಿ ವಿಚಾರ ನ್ಯಾಯಮಂಡಳಿಯಲ್ಲಿ ಈಗಾಗಲೇ ಇತ್ಯರ್ಥವಾಗಿದ್ದರೂ, ಗೋವಾ ಮುಖ್ಯಮಂತ್ರಿ ಹೇಳಿಕೆ ಸರಿಯಾದುದಲ್ಲ. ಮಹದಾಯಿ ಯೋಜನೆಗೆ ಪರಿಸರ ಒಪ್ಪಿಗೆ ಸಿಗಬೇಕಾಗಿದೆಯೇ ಹೊರತು, ಉಚ್ಛ ನ್ಯಾಯಾಲಯದಲ್ಲಿಯೂ ಈ ವಿಚಾರ ಇತ್ಯರ್ಥವಾಗಿದೆ. ಗೋವಾ ಸಿಎಂ ನ್ಯಾಯಾಲಯದ ಮೊರೆ ಹೋಗಲು ನಮ್ಮ ಅಭ್ಯಂತರವಿಲ್ಲ. ನ್ಯಾಯಮಂಡಳಿ ಈಗಾಗಲೇ ನಿರ್ಧಾರ ಮಾಡಿದ್ದು, ಸುಪ್ರೀಂ ಕೋರ್ಟ್ ಸಹ ಎಲ್ಲಾ ವಿವಾದಗಳನ್ನು ಬಗೆಹರಿಸಿದೆ. ಗೋವಾ ಮುಖ್ಯಮಂತ್ರಿಗಳಿಗೆ ನ್ಯಾಯಾಲಯದ ಮೊರೆ ಹೋಗಲು ಯಾವ ಹಕ್ಕೂ ಇಲ್ಲ. ಅರಣ್ಯ ಹಾಗೂ ಪರಿಸರ ಇಲಾಖೆಯು ಕೇಂದ್ರ ಸರ್ಕಾರದಡಿಯಲ್ಲಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ತೀರುವಳಿ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಮತಗಳವು ಆಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ಗಂಭೀರವಾದದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿತ್ತು. ಚುನಾವಣಾ ಕ್ಷೇತ್ರಕ್ಕೆ ಸಂಬಂಧಪಡದ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ರೀತಿ ಇಡೀ ದೇಶದಲ್ಲಿ ನಡೆದಿರುವ ಸಾಧ್ಯತೆಯಿದೆ. ಆದ್ದರಿಂದ ರಾಹುಲ್ ಗಾಂಧಿಯವರು ಈ ಗಂಭೀರ ವಿಚಾರವನ್ನು ಸದನದ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಎಲ್ಲ ಕ್ಷೇತ್ರದಲ್ಲಿ ಮತಎಣಿಕೆಯಲ್ಲಿ ಕಾಂಗ್ರೆಸ್ ಮುಂದಿದ್ದರೂ, ಮಹದೇವಪುರ ಕ್ಷೇತ್ರದಿಂದಾಗಿ ಕಾಂಗ್ರೆಸ್ ಸೋಲುವಂತಾಯಿತು. ಈ ರೀತಿ ಆಗಿರುವುದನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರು, ಈ ಬಗ್ಗೆ ಸಾಕ್ಷ್ಯಾಧಾರಗಳು ಇವೆ ಎಂದಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥವಾಗುವುದರೊಳಗೆ ಸರ್ಕಾರದ ಅವಧಿಯೇ ಮುಗಿದಿರುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಆಯ್ದ ಮತಕ್ಷೇತ್ರಗಳಲ್ಲಿ ಮಾತ್ರ ಮತಗಳವು ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಓಬಿಸಿ ಸಲಹಾ ಮಂಡಳಿಯಲ್ಲಿ ನಾನು ಓರ್ವ ಸದಸ್ಯನಾಗಿದ್ದು, ಜುಲೈ 15 ಹಾಗೂ 16ರಂದು ಬೆಂಗಳೂರಿನಲ್ಲಿ ಮಂಡಳಿಯ ಪ್ರಥಮ ಸಭೆ ನಡೆದಿತ್ತು. ಆ ಸಭೆಯಲ್ಲಿ ಬೆಂಗಳೂರು ಘೋಷಣೆ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. 2015ರಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಜಾತಿಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹತ್ತು ವರ್ಷಗಳ ಹಳೆಯ ಅಂಕಿ ಅಂಶಗಳಾದ್ದರಿಂದ ಕಾನೂನಿನನ್ವಯ ಮರುಗಣತಿ ಮಾಡುವ ಅಗತ್ಯವಿದ್ದ ಕಾರಣ ಸರ್ಕಾರ ಕರ್ನಾಟಕದಲ್ಲಿ ಮರುಗಣತಿ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲಿಯೂ ತೆಲಂಗಾಣ ಮಾದರಿಯಲ್ಲಿ ಜಾತಿಗಣತಿಯನ್ನು ಮಾಡಬೇಕೆಂದು ನಿರ್ಣಯಿಸಲಾಗಿದೆ ಎಂದಿದ್ದಾರೆ.












Click it and Unblock the Notifications