ಐವರು ಸಚಿವರಿಗೆ 2 ತಿಂಗಳ ಡೆಡ್‌ಲೈನ್ ಕೊಟ್ಟ ಸಿಎಂ; ಯಾಕೆ?
ರಾಜ್ಯದಲ್ಲಿ ವಿವಿಧ ಹಗರಣಗಳು ಸದ್ದು ಮಾಡುತ್ತಿರುವ ಹಿನ್ನೆಲೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕಟ್ಟೆಚ್ಚರ ವಹಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಒಂದು ಸಮಿತಿಯನ್ನೂ ಸಿಎಂ ರಚಿಸಿ ಆದೇಶಿಸಿದ್ದಾರೆ. ಸಮಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ಐದು ಮಂದಿ ಪ್ರಭಾವಿ ಸಚಿವರನ್ನು ನೇಮಕ ಮಾಡಲಾಗಿದೆ.
ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ಈ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರನ್ನು ನೇಮಿಸಲಾಗಿದೆ.

ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯ ಪ್ರಗತಿ ಹಾಗೂ ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಈ ಐದು ಮಂದಿ ಸಚಿವರುಗಳನ್ನು ಒಳಗೊಂಡ ಸಮಿತಿ ರಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಈ ಸಮಿತಿ ರಚಿಸಿರುವ ಆದೇಶವನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದು, ಈ ಸಮಿತಿಯು ಮುಂದಿನ ಎರಡು ತಿಂಗಳುಗಳ ಒಳಗೆ ತನಗೆ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುವಂತೆ ಡೆಡ್‌ಲೈನ್ ಕೂಡ ಕೊಟ್ಟಿದ್ದಾರೆ. ರಾಜ್ಯದಲ್ಲಿ ಇತ್ತೀಚಿಗೆ ವಿವಿಧ ಹಗರಣಗಳು ಬಯಲಿಗೆ ಬಂದಿವೆ. ಕೆಲವು ಹಗರಣಗಳು ಸರ್ಕಾರವನ್ನೇ ಅಲುಗಾಡಿಸಿವೆ. ಹೀಗಾಗಿ ಈ ಹಗರಣಗಳ ತ್ವರಿತ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ಅವರು ಈ ಸಮಿತಿ ರಚಿಸಿ, ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ಹೊರಿಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಕೆಲವು ಹಗರಣಗಳು ತನಿಖಾ ಹಂತದಲ್ಲಿದ್ದು, ಇನ್ನು ಕೆಲವು ಹಗರಣಗಳ ಬಗ್ಗೆ ತನಿಖೆ ನಿಧಾನಗತಿಯಲ್ಲಿವೆ. ಹಾಗಾಗಿ ಈ ಸಮಿತಿಯಲ್ಲಿರುವ ಸಚಿವರು ಇವುಗಳ ಮೇಲೆ ನಿಗಾ ವಹಿಸಲಿದ್ದಾರೆ. ಅಲ್ಲದೆ ಎರಡು ತಿಂಗಳ ಅವಧಿಯೊಳಗೆ ಸಿಎಂ ಸಿದ್ದರಾಮಯ್ಯ ಅವರು ವಹಿಸಿರುವ ಈ ಜವಾಬ್ದಾರಿ ಪೂರ್ಣಗೊಳಿಸುವ ಸವಾಲು ಈ ಸಚಿವರಿಗೆ ಎದುರಾಗಿದೆ.












Click it and Unblock the Notifications