ಮುಖ್ಯಮಂತ್ರಿ, ಸಚಿವ ಸಂಪುಟ ಆಯ್ತು; ಇದೀಗ ಖಾತೆ ಹಂಚಿಕೆ ಪೈಪೋಟಿ ಶುರು
2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದೆ.
ಶನಿವಾರ, ಮೇ 20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ 8 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯನವರ ಸಚಿವ ಸಂಪುಟ ಸೇರಿದರು.
ಇನ್ನು ಸೋಮವಾರ, ಮೇ 22ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಈ ವೇಳೆ ಸ್ಪೀಕರ್ ಆಯ್ಕೆ, ನೂತನ ಶಾಸಕರ ಪ್ರಮಾಣ ವಚನ, ರಾಜ್ಯಪಾಲರ ಭಾಷಣ ಹಾಗೂ ವಿಪಕ್ಷ ನಾಯಕನ ಆಯ್ಕೆ ಸಹ ಇರಲಿದೆ.
ಸಿಎಂ ಆಯ್ಕೆ, ಸಚಿವ ಸಂಪುಟ ರಚನೆ ಪೈಪೋಟಿ
ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಜೋರಾಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಾಲ್ಕೈದು ದಿನಗಳ ಕಾಲ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದರು. ಆದರೆ ಕೊನೆಗೆ 30:30 ಸೂತ್ರದ ಮೂಲಕ ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಿಎಂ ಸ್ಥಾನದ ಪೈಪೋಟಿಯ ನಂತರ ಸಚಿವ ಸಂಪುಟ ರಚನೆಯ ಕಸರತ್ತು ಜೋರಾಗಿ ನಡೆದಿತ್ತು. ಇದಕ್ಕಾಗಿಯೇ ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೂ ಹೈಕಮಾಂಡ್ ಬಳಿ ಚರ್ಚೆ ನಡೆಸಲಾಯಿತು. ಸಿದ್ದರಾಮಯ್ಯನವರ ಪಟ್ಟಿ, ಡಿ.ಕೆ. ಶಿವಕುಮಾರ್ ಪಟ್ಟಿ ಹಾಗೂ ಹೈಕಮಾಂಡ್ ಪಟ್ಟಿಯ ನಡುವೆ ತಾಳೆಯಾಗದೆ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಹೀಗಾಗಿ ಸದ್ಯ 8 ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮುಖ ಖಾತೆಗಳಿಗಾಗಿ ಪೈಪೋಟಿ
ಸದ್ಯ ಪ್ರಮಾಣ ವಚನ ಸ್ವೀಕರಿಸಿರುವ 8 ಜನ ಸಚಿವರು ಪ್ರಮುಖ ಖಾತೆಗಳಿಗಾಗಿ ಸಿಎಂ ಸಿದ್ದರಾಮಯ್ಯ ಬಳಿ ಬೇಡಿಕೆ ಇಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂಧನ, ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದಾರೆ.
ಇನ್ನು ಬೆಂಗಳೂರಿನ ಶಾಸಕರಾಗಿರುವ ಕೆ.ಜೆ. ಜಾರ್ಜ್ ಹಾಗೂ ರಾಮಲಿಂಗಾರೆಡ್ಡಿ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸ್ಥಾನ ಕೈತಪ್ಪಿರುವ ಹಿನ್ನೆಲೆ ಡಿ.ಕೆ. ಶಿವಕುಮಾರ್ ಈ ಖಾತೆಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಜಲಸಂಪನ್ಮೂಲ ಖಾತೆ ಮೇಲೆ ಎಂ.ಬಿ. ಪಾಟೀಲ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮೊದಲು 2013-18ರ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂ.ಬಿ. ಪಾಟೀಲ್ ಅವರು ಜಲಸಂಪನ್ಮೂಲ ಖಾತೆ ನಿಭಾಯಿಸಿದ್ದರು. ಇನ್ನು ಲೋಕೋಪಯೋಗಿ ಅಥವಾ ಕಂದಾಯ ಇಲಾಖೆಯ ಮೇಲೆ ಡಾ. ಜಿ. ಪರಮೇಶ್ವರ್ ಕೂಡ ಕಣ್ಣಿಟ್ಟಿದ್ದಾರೆ.
ಅಬಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೇಲೆ ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕ್ ಖರ್ಗೆ ಒತ್ತಡ ಹೇರುತ್ತಿದ್ದಾರೆ. ಜಮೀರ್ ಅಹ್ಮದ್‌ಗೆ ವಕ್ಫ್ ಮತ್ತು ಹಜ್ ಖಾತೆ ಸಿಗುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯನವರು ಯಾವ ಸಚಿವರಿಗೆ ಯಾವ ಖಾತೆ ಹಂಚುತ್ತಾರೆ ಎಂಬ ಕುತೂಹಲಕ್ಕೆ ಇನ್ನೆರಡು ದಿನಗಳಲ್ಲಿ ತೆರೆಬೀಳಲಿದೆ. ಈಗಲೇ ಖಾತೆ ಹಂಚಿಕೆ ಮಾಡುತ್ತಾರಾ ಅಥವಾ ಪೂರ್ಣ ಸಚಿವ ಸಂಪುಟ ರಚನೆಯ ಬಳಿಕ ಖಾತೆ ಹಂಚಿಕೆ ಮಾಡಲಾಗುತ್ತದಾ ಎಂದು ಕಾದು ನೋಡಬೇಕಿದೆ.












Click it and Unblock the Notifications