11 ವರ್ಷಗಳಲ್ಲಿ 147 ಲಕ್ಷ ಕೋಟಿ ಸಾಲ: ಬಿ ವೈ ವಿಜಯೇಂದ್ರಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 22: ಸಾಲದ ಬಗ್ಗೆ ಮಾತನಾಡುವ ವಿಜಯೇಂದ್ರ ಅವರು ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಸಾಲ ಎಷ್ಟಾಗಿದೆ? ರಾಜ್ಯಗಳ ಸಾಲ ಎಷ್ಟಾಗಿದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದು, 2013-14 ರಲ್ಲಿ 53.11 ಲಕ್ಷ ಕೋಟಿ ರೂಗಳಷ್ಟಿದ್ದ ಕೇಂದ್ರದ ಸಾಲ ನಿರ್ಮಾಲಾ ಸೀತಾರಾಮನ್ ಅವರೇ ಈ ಬಜೆಟ್ ನಲ್ಲಿ ಘೋಷಿಸಿರುವಂತೆ 2026 ರ ಮಾರ್ಚ್ ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. ಅದನ್ನೂ ಮೀರಬಹುದು. 11 ವರ್ಷಗಳಲ್ಲಿ 147 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್ ಮೊತ್ತದ ಸಾಲ ಯಾಕಾಯಿತು? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಯವರ ಆರ್ಥಿಕ ನೀತಿಗಳಿಂದ ರಾಜ್ಯಗಳ ಆರ್ಥಿಕ ಸ್ಥಿತಿಯೂ ಅಯೋಮಯವಾಗಿದೆ. 2014 ರ ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳ ಸಾಲ 25 ಲಕ್ಷ ಕೋಟಿ ರೂ. ಇದ್ದದ್ದು ಈಗ 95 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಸಾಲ 70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ರಾಜ್ಯಗಳೂ ತ್ರಾಸ ಪಡುತ್ತಿವೆ. ಕೇಂದ್ರದ ಆರ್ಥಿಕತೆಯೂ ದುರ್ಬಲವಾಗುತ್ತಿದೆ.
ಮತ್ತೊಮ್ಮೆ ತಿಳಿಸಬಯಸುವುದೇನೆಂದರೆ ನಮ್ಮ ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸದೃಢವಾಗಿದೆ. ನಾವು ದೆಹಲಿಯ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಮಾಡುತ್ತಿರುವ ದ್ರೋಹದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಇಷ್ಟರ ನಡುವೆಯೂ ನಾವು ನುಡಿದಂತೆ ನಡೆಯುತ್ತೇವೆ, ನಮ್ಮ ಜನರ ಜೊತೆ ನಿಲ್ಲುತ್ತೇವೆ. ರಾಜ್ಯದ ವಿರೋಧ ಪಕ್ಷದವರು ಸುಳ್ಳು ಹೇಳುವುದನ್ನು ನಿಲ್ಲಿಸಿ ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಸರ್ಕಾರವು ನಡೆಸುತ್ತಿರುವ ಹೋರಾಟದಲ್ಲಿ ಜೊತೆಯಾಗಬೇಕೆಂದು ಮನವಿ ಮಾಡುತ್ತೇನೆ.
ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿಯವರು ಹಾಗೂ ಇತರೆ ವಿರೋಧ ಪಕ್ಷದ ಮುಖಂಡರುಗಳು ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ, ರಾಜ್ಯ ದಿವಾಳಿಯಾಗುತ್ತಿದೆ, ಹಣಕಾಸಿನ ವ್ಯವಸ್ಥೆ ನೆಲ ಕಚ್ಚಿದೆ ಎಂದೆಲ್ಲ ಆರೋಪಿಸಿ ಮಾತನಾಡಿದ್ದಾರೆ. ಆ ಮೂಲಕ ಜನರನ್ನು ಸಶಕ್ತಗೊಳಿಸುತ್ತಿರುವ ನಮ್ಮ ಗ್ಯಾರಂಟಿ ಹಾಗೂ ಇನ್ನಿತರೆ ಯೋಜನೆಗಳನ್ನು ಟೀಕಿಸಿದ್ದಾರೆ. ವಾಸ್ತವವೇನೆಂದರೆ, ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಆದರೆ ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಅಥವಾ ಅರಿತುಕೊಳ್ಳಲಾರದೆ ಬಿಜೆಪಿಯವರು ಮಾತಾಡುತ್ತಿರುವುದು ದುರಂತ.
ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದಾಗ ಬಜೆಟ್‌ಗಳಲ್ಲಿ ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. 31-3-2023 ಕ್ಕೆ ಬಂಡವಾಳ ವೆಚ್ಚ ಮಾಡುವ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಕೇವಲ ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದರು.












Click it and Unblock the Notifications