ಕುಮಾರಸ್ವಾಮಿ ಈ ಕೆಲಸ ಮಾಡುವುದಾದ್ರೆ ನಾವೂ ರೆಡಿ: ಸಿಎಂ ಹಾಕಿದ ಸವಾಲು ಏನು?
ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸವಾಲ್ ಹಾಕಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಅವರು ಪ್ರವಾಹ ಪರಿಹಾರವನ್ನು ಕೇಂದ್ರದಿಂದ ಕೊಡಿಸುವುದಾಗಿ ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಆದರೆ 2023ರಲ್ಲಿ ರಾಜ್ಯಕ್ಕೆ ಬರಗಾಲ ಬಂದಿದ್ದಾಗ, ಕೇಂದ್ರ ಸರ್ಕಾರದವರು ಬರ ಪರಿಹಾರ ನೀಡದೇ ಸುಪ್ರೀಂಕೋರ್ಟ್ ಬಳಿ ಧಾವಿಸಿ, ಬಳಿಕ ಕಾನೂನಾತ್ಮಕ ಹೋರಾಟದಿಂದ ಪರಿಹಾರ ತೆಗೆದುಕೊಳ್ಳುವಂತಾಯಿತು. ಪ್ರಸ್ತುತ ಕುಮಾರಸ್ವಾಮಿಯವರು ಪರಿಹಾರ ಕೊಡಿಸುವುದಾದರೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಲ್ಲಿಸಲಿದೆ ಎಂದಿದ್ದಾರೆ.
ಇನ್ನು ಬಿಜೆಪಿಯವರು ಯಥಾಸ್ಥಿತಿ ವಾದಿಗಳು. ನಾವು ಮಾಡುತ್ತಿರುವ ಸಮೀಕ್ಷೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದಂತೆ ಅಸಮಾನತೆ ಹೋಗಲಾಡಿಸಲು ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಠವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರವೂ ಜಾತಿಗಣಿತಿ ನಡೆಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಉತ್ತರ ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಶೇ.95ರಷ್ಟು ಪ್ರವಾಹ ಸಂಭವಿಸಿದೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ ಎಂದು ವಿವರ ನೀಡಿದ್ದಾರೆ.
ಖರ್ಗೆ ಆರೋಗ್ಯ ಸ್ಥಿರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಆರೋಗ್ಯದ ಬಗ್ಗೆಯೂ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಸುಧಾರಣೆಯಾಗಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಅವರ ಆರೋಗ್ಯವೀಗ ಉತ್ತಮವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡೋದಲ್ಲ, ಸೋಮಾರಿತನ ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಬರಬೇಕು. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇಂದು ಜ್ಞಾನೋದಯವಾಗಿದೆ. ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು?ಸರ್ಕಾರದ ವಿರುದ್ಧ ಟೀಕೆಗಳು ಬಂದಿದ್ದರಿಂದ ಸಿಎಂ ನೆರೆಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ವೀಕ್ಷಣೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಪಕ್ಷಗಳ ಬಗ್ಗೆ ಸಿದ್ದರಾಮಯ್ಯ ಅವರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಬಹಳ ನಿರಾಸೆಯಾಗುತ್ತದೆ. ಪ್ರತಿಪಕ್ಷವನ್ನು ಬೈದರೆ ನೆರೆ ಸಂತ್ರಸ್ತರ ಸಮಸ್ಯೆ ಪರಿಹಾರವಾಗುತ್ತದೆಯೇ? ಅವರ ಹೇಳಿಕೆಗಳು ಅವರ ಹುದ್ದೆಗೆ ಸರಿಹೊಂದುತ್ತಿಲ್ಲ. ಸಂಪುಟದಲ್ಲಿ 36 ಜನ ಮಂತ್ರಿಗಳಿದ್ದಾರೆ. ಅವರೆಲ್ಲರೂ ಎಸಿ ರೂಂಗಳಲ್ಲಿ ಕೂತು ಸಮಯ ಕಳೆದಿದ್ದು ಸಾಕು ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications