5 ಗ್ಯಾರಂಟಿ ಯೋಜನೆಗಳ ಅನುಷ್ಠಾನ; ಸಿದ್ದರಾಮಯ್ಯ ಮಹತ್ವದ ಸಭೆ
ಬೆಂಗಳೂರು, ಮೇ 29; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬೇಕಿದೆ. ಈಗಾಗಲೇ ಪ್ರತಿಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಹೊಸ ಸರ್ಕಾರವನ್ನು ಟೀಕಿಸುತ್ತಿವೆ.
ಸೋಮವಾರ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಪ್ರಮುಖ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಯೋಜನೆಗಳ ಅನುಷ್ಠಾನಕ್ಕೆ ಆಗುವ ವೆಚ್ಚದ ಕುರಿತು ಚರ್ಚೆ ನಡೆಸಿದರು.

ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ 5 ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಗ್ಯಾರಂಟಿ ಬಗ್ಗೆ ಭಾರೀ ಚರ್ಚೆಗಳು ಕಾರಣವಾಗಿವೆ.
ಫಲಾನುಭವಿಗಳು ಎಷ್ಟು?; ಅದರಲ್ಲೂ ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಹಲವು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸುಮಾರು 1.30 ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದರು, ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಆ ಸಭೆಯಲ್ಲಿ 5 ಗ್ಯಾರಂಟಿಗಳ ಕುರಿತು ಹೊಸ ಆದೇಶ ನಿರೀಕ್ಷೆ ಮಾಡಲಾಗಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ಯಾರಂಟಿ ಯೋಜನೆ ಹೇಗೆ ಜಾರಿ?, ರೂಪುರೇಷೆ ಏನಿರಬೇಕು?, ಎಷ್ಟು ವೆಚ್ಚವಾಗಲಿದೆ?, ಫಲಾನುಭವಿಗಳು ಎಷ್ಟು? ಎಂದು ಸಭೆಯಲ್ಲಿ ಅಂಕಿ, ಅಂಶಗಳ ಸಮೇತ ಚರ್ಚೆಗಳು ನಡೆದಿವೆ.
'ಗೃಹಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮಾರ್ಚ್‌ನಿಂದ 200 ಯೂನಿಟ್ ವಿದ್ಯುತ್ ಬಳಕೆ ಮಾಡಿದ ಮನೆಗಳು ಎಷ್ಟು? ಎಂದು ಸಿದ್ದರಾಮಯ್ಯ ಮಾಹಿತಿ ಪಡೆದರು.
ವಿಪಕ್ಷಗಳ ಟೀಕೆ; ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಜೂನ್ 1ರಿಂದ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿವೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಇಂದು ಮಹತ್ವದ ಸಭೆಯನ್ನು ನಡೆಸಿದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, "ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬೇಡಿ, ಗಾಬರಿಯಾಗಬೇಡಿ. ಯಾರು ಬೇಕಾದರೂ ಟೀಕೆ ಮಾಡಲಿ ಅದಕ್ಕೆ ನಾವು ಬೇಡ ಎನ್ನುವುದಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಮಾತನಾಡುವವರು ನಮ್ಮನ್ನು ತಿದ್ದಲಿ, ನಾವು ಮಾಡಿ ತೋರಿಸುತ್ತೇವೆ" ಎಂದರು.
ಶಿರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ಬಿ. ಜಯಚಂದ್ರ ಮಾತನಾಡಿ, "ಗ್ಯಾರಂಟಿ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲ ಕ್ರೋಡಿಕರಿಸಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನಿರ್ಧಾರಕ್ಕೆ ಬರುವವರೆಗೂ ಸಚಿವರು ವಿಶ್ಲೇಷಣೆ ಮಾಡುವುದು ತಪ್ಪು. ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮಾಡುತ್ತದೆ. ಹಾಗಾಗಿ ಸಚಿವರು ಮಾತನಾಡಬಾರದು" ಎಂದರು.
ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಚರ್ಚೆಗೆ ಕಾರಣವಾಗಿವೆ. ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮಹಿಳೆಯರು ಬಸ್‌ನಲ್ಲಿ ಟಿಕೆಟ್ ಪಡೆಯಲ್ಲ ಎಂದು ಗಲಾಟೆ ಮಾಡುತ್ತಿದ್ದಾರೆ. ವಿಪಕ್ಷಗಳ ನಾಯಕರು ಸಹ ಜನರಿಗೆ ಬೆಂಬಲ ನೀಡುತ್ತಿದ್ದಾರೆ.












Click it and Unblock the Notifications