ಅತ್ತಿಬೆಲೆ ದುರಂತ: ಹಬ್ಬ ಇನ್ನಿತರ ಸಮಾರಂಭಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 10: ಬೆಂಗಳೂರಿನಲ್ಲಿ 14 ಜೀವಗಳ ಸಾವಿಗೆ ಕಾರಣವಾದ ಅತ್ತಿಬೆಲೆ ಪಟಾಕಿ ದುರ್ಘಟನೆ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಹಬ್ಬಗಳು, ಸಮಾರಂಭ, ಮೆರವಣಿಗೆಗಳು, ಮದುವೆಗಳನ್ನು ಪಟಾಕಿ ಸಿಡಿಸಿ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಿಳಿಸಿದ್ದಾರೆ
ಅತ್ತಿಬೆಲೆ ಪಟಾಕಿ ದುರ್ಘಟನೆ ನಡೆದ ಬಳಿಕ ಅಧಿಕಾರಿಗಳ ಜೊತೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚಿಸಿದ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೇ ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ದೀಪಾವಳಿಯನ್ನು ಬೆಳಕಿನ ಜೊತೆಗೆ ಭರ್ಜರಿ ಪಟಾಕಿ ಸಿಡಿಸಿ ಆಚರಣೆ ಮಾಡಬೇಕು ಎಂದಕೊಂಡವರಿಗೂ ಸರ್ಕಾರ ಶಾಕ್ ನೀಡಿದ್ದು, ಜನರ ರಕ್ಷಣೆಗೆ ಕ್ರಮ ವಹಿಸಿದೆ. ಮುಂಬರಲಿರುವ ದೀಪಾವಳಿ ಹಬ್ಬದಲ್ಲಿ ಕೇವಲ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಪಟಾಕಿ ಸಿಡಿಸುವಾಗಿ ಕಡ್ಡಾಯವಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಆಗಬೇಕು. ಒಂದು ವೇಳೆ ಉಲ್ಲಂಘನೆ ಆದರೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಅವಕಾಶ
ಹಬ್ಬಗಳು, ರಾಜಕೀಯ ಕಾರ್ಯಕ್ರಮಗಳಲ್ಲಿ, ಗಣೇಶ ಹಬ್ಬದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೀಪಾವಳಿ ಹಬ್ಬದಲ್ಲಿ ಮಾತ್ರ ಪರಿಸರ ಸ್ನೇಹಿಯಾದ ಮಾಲಿನ್ಯಕಾರವಲ್ಲದ ಹಸಿರು ಪಟಾಕಿ ಹೊಡೆಯಲು ಅವಕಾಶ ಇದೆ. ಇದನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇದರೊಂದಿಗೆ ಪಟಾಕಿ ಮಾರಾಟಗಾರರಿಗೆ ತಾಕೀತು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ನು ಮುಂದೆ ಪಟಾಕಿ ಮಾರಾಟ ಮಾಡಲು ಮಾರಾಟಗಾರರು ಪ್ರತಿ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕು. ಸರ್ಕಾರದ ಈ ಆದೇಶ ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪರವಾನಿಗೆ ನವೀಕರಣ ಅವಧಿ ಇಳಿಕೆ
ಈ ಹಿಂದೆ ಐದು ವರ್ಷಕ್ಕೊಮ್ಮೆ ಮಾತ್ರ ಪರವಾನಿಗೆ ನವೀಕರಣಕ್ಕೆ ಅವಕಾಶ ಇತ್ತು. ಇದೀಗ ಅದನ್ನು ಒಂದು ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಅಧಿಕಾರಿಗಳು ದೀಪಾವಳಿ ವೇಳೆ ಸೂಕ್ತ ಕ್ರಮ ವಹಿಸಬೇಕು. ಕೇವಲ ಹಸಿರು ಪಟಾಕಿಗಳನ್ನು ಹೊಡೆಯಲು ಮಾತ್ರವೇ ಅವಕಾಶ ನೀಡಬೇಕು ಎಂದು ತಿಳಿಸಿದರು.












Click it and Unblock the Notifications