Tulu Language: ರಾಜ್ಯದ ಎರಡನೇ ಭಾಷೆಯಾಗಿ ತುಳು, ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ
ರಾಜ್ಯದಲ್ಲಿ ಈಗಾಗಲೇ ಕನ್ನಡ ಭಾಷೆಯನ್ನು ಅಧಿಕೃತವಾಗಿ ಆಡಳಿತ ಭಾಷೆ ಎಂದು ಪರಿಗಣಿಸಿ ಸ್ಥಾನಮಾನ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಾತನಾಡುವ ತುಳು ಭಾಷಿಕರು ಕೂಡ ಹಲವು ವರ್ಷಗಳಿಂದ ಎರಡನೇ ದರ್ಜೆಯ ಸ್ಥಾನಮಾನವನ್ನು ತುಳು ಭಾಷೆಗೆ ನೀಡುವಂತೆ ಬೇಡಿಕೆ ಇಡುತ್ತಾ ಬಂದಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಉಳ್ಳಾಲದ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮ ದೇಶ ಬಹುತ್ವದ ದೇಶ. ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ನಮ್ಮ ಸರ್ಕಾರ ಕೂಡ ಎಲ್ಲ ಜಾತಿ, ಎಲ್ಲ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಸುಪ್ರೀಂಕೋರ್ಟ್ ನಿಷೇಧವನ್ನು ತೆರವುಗೊಳಿಸಲು ನಮ್ಮ ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ. ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಂಬಳಕ್ಕೆ ಎಲ್ಲ ರೀತಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರ ಬರೆದಿರುವುದರಿಂದ ಕಂಬಳ ಉಳಿದುಕೊಂಡಿದೆ. ಕಂಬಳದ ಕುರಿತು ಯೋಜನೆ ರೂಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಸಿಹಿಸುದ್ದಿ ನೀಡಿದ್ದಾರೆ.

24 ಕಂಬಳಗಳನ್ನು ನಡೆಸಲು ಪ್ರತೀ ಕಂಬಳಕ್ಕೆ ತಲಾ 5 ಲಕ್ಷ ರೂಪಾಯಿ ನೆರವನ್ನು ನಮ್ಮ ಸರ್ಕಾರ ನೀಡಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರು ಸ್ಪೀಕರ್ ಆಗುವ ಮೂಲಕ ಪ್ರೋಟೋಕಾಲ್ ಪ್ರಕಾರ ನನಗಿಂತ ಎತ್ತರದಲ್ಲಿದ್ದಾರೆ. ಮುಂದೆ ಇದಕ್ಕಿಂತ ಒಳ್ಳೆಯ ಅವಕಾಶಗಳು ಸಿಗಬಹುದು. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಯು.ಟಿ.ಖಾದರ್ ಅವರು ಸ್ಪೀಕರ್ ಆದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂಪಾಯಿಯಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ಅಷ್ಟೊಂದು ಪ್ರೀತಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಂಡಿದೆ. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕಗಳು ಸೇರಿದಂತೆ 10 ಸಾವಿರ ರೂಪಾಯಿಗಳ ಗೌರವಧನ ನೀಡಲು ಸರ್ಕಾರ ಒಪ್ಪಿದೆ. ಒಂದು ವೇಳೆ 10 ಸಾವಿರಗಳಷ್ಟು ಪ್ರೋತ್ಸಾಹಕಗಳು ಬಾರದೆ ಹೋದರೆ, ಸರ್ಕಾರವೇ ಅದನ್ನು ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಈಗ ಆರು ನಕ್ಸಲರು ಶರಣಾಗಿದ್ದಾರೆ. ಅವರನ್ನು ಕಾಡಿನಿಂದ ನ್ಯಾಯಾಲಯಕ್ಕೆ, ನಂತರ ನಾಡಿಗೆ ಕರೆತಂದಿರುವುದು ಅವರು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಿ, ಮುಖ್ಯವಾಹಿನಿಗೆ ಬರಬೇಕು ಎಂದು. ಶಾಂತಿಯುತ ಹೋರಾಟಕ್ಕೆ ನಮ್ಮ ತಕರಾರಿಲ್ಲ. ಸಂವಿಧಾನದಲ್ಲಿ ಶಾಂತಿಯುತ ಹೋರಾಟಕ್ಕೆ ಅವಕಾಶವಿದ್ದು, ಅದರಂತೆ ಹೋರಾಟ ಮಾಡಿದರೆ ಅದಕ್ಕೆ ನಮ್ಮ ಸಹಕಾರವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications