ಇದು.. ಇದು ಚೆನ್ನಾಗಿರೋದು ಅಂತ ಶಾಸಕ ಪ್ರದೀಪ್ ಈಶ್ವರ್ ಬೆನ್ನು ತಟ್ಟಿದ ಸಿ.ಎಂ ಸಿದ್ದರಾಮಯ್ಯ, ಏನದು
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಹಾಸ್ಯ ಹಾಗೂ ಮೊಟಿವೇಶನ್‌ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದೀಗ ಸಿ.ಎಂ ಸಿದ್ದರಾಮಯ್ಯ ಅವರು ಶಾಸಕ ಪ್ರದೀಪ್ ಈಶ್ವರ್‌ಗೆ ಇದು.. ಇದು ಚೆನ್ನಾಗಿರೋದು ಅಂತ ಹೇಳಿ ಬೆನ್ನು ಸಹ ತಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ವಿಧಾನಸಭೆ ಚುನಾವಣೆಯ ಸಮಯದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಚಿಕ್ಕಬಳ್ಳಾಪುರ ವಿಧಾನಸಭೆ ಚುನಾವಣೆಯಲ್ಲಿ ಅವರ ಅಬ್ಬರದ ಭಾಷಣಗಳು ಹಾಗೂ ಮಾಸ್ ಡೈಲಾಗ್‌ಗಳು ಸದ್ದು ಮಾಡಿದ್ದವು. ಸೆಲ್ಫಿಶ್ ಎನ್ನುವ ಮೊಟಿವೇಶನ್ ಡೈಲಾಗ್ ಮೂಲಕ ಅವರು ಕರ್ನಾಟಕದಾದ್ಯಂತ ಇನ್ನಷ್ಟು ಫೇಮಸ್ ಆಗಿದ್ದಾರೆ ಅಂತಲೇ ಹೇಳ್ಬೇದು. ಇದೀಗ ಸಿದ್ದರಾಮಯ್ಯ ಅವರು ಪ್ರದೀಪ್ ಈಶ್ವರ್‌ಗೆ ಶಬಾಷ್ ಅಂತ ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚಿಗೆ ಸೂಚಿಸಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದು, ಅದರ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ. ಇವರಿಗೆ ರಾಜ್ಯದ ವಿವಿಧ ಭಾಗದ ಜನರಿಂದಲೂ ಕರೆಗಳು ಬರುವುದು ಇದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಇವರು ಹಾಕಿಕೊಂಡ ಯೋಜನೆಗಳಿಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಷ್ ಎಂದಿದ್ದಾರೆ.

ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸುತ್ತಿರುವುದು ಉತ್ತಮ ಕೆಲಸ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮುಂದುವರಿದು ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಅವರ ವಿನೂತನ ಪ್ರಯತ್ನಕ್ಕೆ ಬೆನ್ನುತಟ್ಟಿ ಶುಭ ಹಾರೈಸಿದೆ ಎಂದಿದ್ದಾರೆ ಸಿ.ಎಂ ಸಿದ್ದರಾಮಯ್ಯ ಅವರು. ಈ ರೀತಿಯ ಜನಪರವಾದ ಕಾರ್ಯಗಳಿಗೆ ನನ್ನ ಹಾಗೂ ನಮ್ಮ ಸರ್ಕಾರದ ಬೆಂಬಲ ಸದಾಕಾಲ ಇರಲಿದೆ ಎಂಬ ವಿಶ್ವಾಸವನ್ನು ಅವರಲ್ಲಿ ತುಂಬಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದ ಅಧಿಕಾರಿಗಳ ಬಗ್ಗೆಯೂ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದ್ದಾರೆ. "ನಮ್ಮ ಊರಿಗೆ ನಮ್ಮ ಶಾಸಕರು" ಕಾರ್ಯಕ್ರಮದ ಯಶಸ್ಸಿಗಾಗಿ ಶಾಸಕರಾದ ಪ್ರದೀಪ್ ಈಶ್ವರ್ ಅವರೊಂದಿಗೆ ಹೆಗಲಿಗೆ ಹೆಗಲಾಗಿ ದುಡಿಯುತ್ತಿರುವ ಚಿಕ್ಕಬಳ್ಳಾಪುರ ತಹಸೀಲ್ದಾರ್ ಅನಿಲ್, ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ ಅವರ ಶ್ರಮ ಕೂಡ ಶ್ಲಾಘನೀಯ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಹಾಗೂ ಅಧಿಕಾರಿಗಳು ಇಲ್ಲಿಯ ವರೆಗೆ ಅಂದಾಜು 50 ಹಳ್ಳಿಗಳಿಗೆ ಹೋಗಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ ಹಾಗೂ ನಿವೇಶನ ಸೇರಿದಂತೆ ಸಾರ್ವಜನಿಕರ ನಿತ್ಯ ಬದುಕಿಗೆ ತೊಡಕಾಗಿದ್ದ ಹಲವು ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಕಾಲಮಿತಿಯಲ್ಲಿ ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಆಶಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಟೋ ಹಾಗೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications