ಆನೆ-ಮಾನವ ಸಂಘರ್ಷ ತಡೆಗೆ ಸರ್ಕಾರದಿಂದ ಶಾಶ್ವತ ಪರಿಹಾರ
ಬೆಂಗಳೂರು, ಡಿಸೆಂಬರ್ 04 : 'ರಾಜ್ಯದಲ್ಲಿ ಆನೆ ದಾಳಿಯಿಂದ ಜನರು ಸಾಯದಂತೆ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ' ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೊಂದರೆಗೊಳಗಾದ ರೈತರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಸಭೆ ನಡೆಯಿತು.
ಆನೆಗಳ ಹಾವಳಿಯಿಂದ ಭತ್ತ, ಬಾಳೆ, ಅಡಿಕೆ, ಕಾಫಿ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಮಾನವ - ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕವಾಗಿ ಪರಿಹಾರವನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದರು.

ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, 'ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು 6000 ಆನೆಗಳು ರಾಜ್ಯದಲ್ಲಿದ್ದು, ಆನೆಗಳ ಹಾವಳಿಯನ್ನು ತಡೆಯಲು ತೊಂದರೆಯುಂಟು ಮಾಡುತ್ತಿರುವ ಆನೆಗಳನ್ನು ಹಿಡಿದು ಶಿಬಿರಗಳಿಗೆ ಕಳುಹಿಸುವುದಕ್ಕೆ ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಿಕೊಳ್ಳುವಂತೆ' ಸೂಚಿಸಿದರು.
'ಪ್ರಸ್ತುತ, ಆನೆ ಹಾವಳಿ ತಡೆಗೆ ಈವರೆಗೆ 71 ಕಿ.ಮೀ ರೈಲು ತಡೆಗೋಡೆ ನಿರ್ಮಾಣವಾಗಿದ್ದು, ಬಜೆಟ್‌ನಲ್ಲಿ ಮೀಸಲಿಟ್ಟಿರುವ 50 ಕೋಟಿ ರೂ.ಗಳ ಅನುದಾನದಲ್ಲಿ ರಾಜ್ಯದಲ್ಲಿ ಅಗತ್ಯವಿರುವ 400 ರಿಂದ 500 ಕಿ.ಮೀ ತಡೆಗೋಡೆ ನಿರ್ಮಾಣಕ್ಕೆ ಸಾಲದು. ಹಾಗಾಗಿ 3-4 ವರ್ಷಗಳಿಗೆ ಅಗತ್ಯವಿರುವ ಹಣಕಾಸಿನ ನೆರವಿನ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ' ತಿಳಿಸಿದರು.
ರೈಲ್ವೆ ಇಲಾಖೆಯಿಂದ ಕಂಬಿ ಖರೀದಿ ಬೆಲೆ ದುಬಾರಿಯಾಗಿದ್ದು, ಬೇರೆ ಪ್ರದೇಶಗಳಿಂದ ಕಂಬಿ ಸಾಗಾಣಿಕೆ ಮಾಡಬೇಕಾಗಿರುವುದರಿಂದ ಸಾರಿಗೆ ವೆಚ್ಚವೂ ಸೇರುತ್ತದೆ, ಆದ್ದರಿಂದ ರಿಯಾಯಿತಿ ಬೆಲೆಯಲ್ಲಿ ರೈಲು ಕಂಬಿ ನೀಡುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದಲ್ಲಿ ಆನೆ ದಾಳಿಯಿಂದ ಜನ ಸಾಯದಂತೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾನವ- ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
— CM of Karnataka (@CMofKarnataka) December 4, 2018
ರೈಲು ತಡೆಗೋಡೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವ ಡಾ. ಹರ್ಷವರ್ಧನ್ ಅವರನ್ನು ಭೇಟಿಯಾಗಿ ಸಮಸ್ಯೆಗೆ ನೆರವು ನೀಡಲು ಮನವಿ ಸಲ್ಲಿಸುವುದಾಗಿಯೂ ಹೇಳಿದರು.
ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಅರಣ್ಯ ಸಚಿವ ಆರ್. ಶಂಕರ್,ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜರಾಜು, ಶಾಸಕ ಆರಗ ಜ್ಞಾನೇಂದ್ರ, ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ರೈತರು ಭಾಗವಹಿಸಿದ್ದರು.












Click it and Unblock the Notifications