Government Employees: OPS ಜಾರಿಗೆ ಸರ್ಕಾರದಿಂದ ಸ್ಪಷ್ಟ ಸಂದೇಶ : ಸಿಎಸ್ ಷಡಕ್ಷರಿ ಕೊಟ್ಟ ಮಾಹಿತಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 21: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರಿ ನೌಕರರು ಸಮಾವೇಶವನ್ನ ನಡೆಸಿದ್ದು, ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾಹಿತಿ ನೀಡಿದ್ದಾರೆ.
ದಿನಾಂಕ 20 ಫೆಬ್ರವರಿ 2025ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ-ತಾಲ್ಲೂಕು ಶಾಖೆಗಳ ನಿರ್ದೆಶಕರು-ಪದಾಧಿಕಾರಿಗಳ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಭಗವಹಿಸಿ, ಓಪಿಎಸ್ ಜಾರಿಗೊಳಿಸುವ ಸ್ಪಷ್ಟ ಸಂದೇಶ ನೀಡಿರುವುದು ರಾಜ್ಯ ಎನ್‌ಪಿಎಸ್ ನೌಕರರಿಗೆ ಅತೀವ ಸಂತಸ ತಂದಿದೆ. ಇದರ ಜೊತೆ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಶೀಘ್ರ ಜಾರಿಗೊಳಿಸುವ ಭರವಸೆಯು ನೌಕರರಿಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರು, ಯೋಜನಾ ಶಾಖೆಯ ಅಧ್ಯಕ್ಷರು, ಜೊತೆಗೆ ತಾಲ್ಲೂಕು-ಜಿಲ್ಲಾ ಹಂತದ ಪದಾಧಿಕಾರಿಗಳು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು, ಜೊತೆಗೆ ಭಾಗವಹಿಸಿದ ಎಲ್ಲಾ ನಿರ್ದೇಶಕ ಬಂಧುಗಳಿಗೆ ತುಂಬುಹೃದಯದ ಕೃತಜ್ಞತೆಗಳೊಂದಿಗೆ ಧನ್ಯವಾದ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.
ಇನ್ನೂ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಪಿಎಸ್ ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ ಎಂದು ತಿಳಿಸಿದರು.
ಸರ್ಕಾರದ ರಥ ಎಳೆಯುವವರು ಸರ್ಕಾರಿ ನೌಕರರು. ನೀವು ಇಲ್ಲದಿದ್ದರೆ ಸರ್ಕಾರದ ಚಕ್ರ ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ಸಂಘ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಕೆಲಸ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿ. ನೀವು ಹೃದಯ ಶ್ರೀಮಂತಿಕೆಯಿಂದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು. ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ಸರ್ಕಾರಿ ನೌಕರರು ನೀವೀದ್ದೀರಿ. ನಿಮ್ಮ ಜವಾಬ್ದಾರಿ ನನಗೆ ಅರಿವಿದೆ. ನಾವು ದೇವಾಲಯಕ್ಕೆ ಹೋದಾಗ ದೇವರ ಬಳಿ ಏನು ಮಾತನಾಡಬೇಕು ತಿಳಿಯದೇ ಇದ್ದಾಗ ನಮ್ಮ ಮಧ್ಯೆ ಮಾತುಕತೆ ನಡೆಸಲು ಅರ್ಚಕರು ಸಹಾಯ ಮಾಡುತ್ತಾರೆ.
ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ" ಅಂದರೆ ಅರ್ಚಕರ ಪ್ರಭಾವದಿಂದ ನಾವು ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂದು ಅರ್ಥ. ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಸರ್ಕಾರ ಹಾಗೂ ಜನರ ಮಧ್ಯೆ ಸಂಪರ್ಕ ಸೇತುವೆಯಂತೆ ಇದ್ದಾರೆ. ಜನ ದೇವಾಲಯಕ್ಕೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋಗುವಂತೆ ಜನ ತಮ್ಮ ಸಮಸ್ಯೆಯನ್ನು ಹೊತ್ತು ನಿಮ್ಮ ಬಳಿಗೆ ಬರುತ್ತಾರೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.












Click it and Unblock the Notifications