ಸಂಶೋಧನಾ ಘಟಕ ಸ್ಥಾಪನೆಗೆ ಯುಕೆ ಹೂಡಿಕೆದಾರರಿಗೆ ಸಿಎಂ ಆಹ್ವಾನ
ಬೆಂಗಳೂರು, ಡಿಸೆಂಬರ್ 01: ಯುನೈಟೆಡ್ ಕಿಂಗ್‌ಡಮ್ (UK) ಹೂಡಿಕೆದಾರರು ವಿಫುಲ ಅವಕಾಶವಿರುವ ಕರ್ನಾಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕಾ ಘಟಕಗಳ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಹ್ವಾನಿಸಿದರು.
ಬುಧವಾರ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹಾಗೂ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ನೇಮಕಗೊಂಡ ಚಂದ್ರು ಅಯ್ಯರ್ ಜತೆಗೆ ಮಾತುಕತೆ ನಡೆಸಿದರು.
ಬಳಿಕ ಕರ್ನಾಟಕ ರಾಜ್ಯವು ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಹೊಂದಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೂ ಹೊಸ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಬ್ರಿಟಿಷ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಶೇ.14ರಷ್ಟು ಬ್ರೀಟಿಷ್ ಕಂಪನಿ ಕರ್ನಾಟಕದಲ್ಲಿ
ಯು.ಕೆ ಹಾಗೂ ಕರ್ನಾಟಕ ರಾಜ್ಯದ ನಡುವಿನ ಬಾಂಧವ್ಯ ವಿಶೇಷವಾದುದು. ಕರ್ನಾಟಕದಲ್ಲಿರುವ ಯು.ಕೆ. ಕಂಪೆನಿಗಳ ಸಂಖ್ಯೆ ಗಣನೀಯವಾಗಿವೆ. ಒಂದು ವರದಿಯ ಪ್ರಕಾರ ಭಾರತದಲ್ಲಿರುವ 618 ಬ್ರಿಟಿಷ್ ಮಾಲೀಕತ್ವದ ಕಂಪೆನಿಗಳಲ್ಲಿ ಶೇ. 14 ರಷ್ಟು ಕರ್ನಾಟಕದಲ್ಲಿವೆ. ದಕ್ಷಿಣ ಭಾರತದಲ್ಲಿಯೇ ಅತ್ಯಧಿಕ ಕಂಪನಿಗಳು ಕರ್ನಾಟಕದಲ್ಲಿವೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅಯನ್ ರಿನ್ಯೂವೇಬಲ್ ಪವರ್ ಲಿಮಿಟೆಡ್ ಯುಕೆಯ ಅತಿ ವೇಗವಾಗಿ ಬೆಳೆಯುತ್ತಿರುವ ಕಂಪೆನಿಯಾಗಿದೆ ಎಂದು ತಿಳಿಸಿದರು.
ಈಸ್ ಆಫ್ ಡೂಯಿಂಗ್ ಬಿಸಿನೆಸ್, ವಿದ್ಯುತ್ ಚಾಲಿತ ವಾಹನ ಬಳಕೆಯ ಕುರಿತ ಜಾಗೃತಿ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಯುಕೆ ಹಾಗೂ ಕರ್ನಾಟಕದ ಸಹಯೋಗದ ಕುರಿತು ಉಭಯ ನಾಯಕರು ಚರ್ಚಿಸಲಾಯಿತು. ಯುಕೆಯಲ್ಲಿನ ಕನ್ನಡಿಗರ ಕೊಡುಗೆ ಹಾಗೂ ಕನ್ನಡಿಗರು ಅಲ್ಲಿದ್ದುಕೊಂಡು ಭಾರತ ಹಾಗೂ ಯು.ಕೆ. ನಡುವೆ ಬಾಂಧವ್ಯ ಬಲಪಡಿಸುತ್ತಿರುವ ಕುರಿತು ಬ್ರಿಟಿಷ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸಲಹೆಗಳನ್ನು ಪರಿಗಣಿಸುವುದಾಗಿ ಬ್ರೀಟಿಷ್ ಅಧಿಕಾರಿಗಳು ತಿಳಿಸಿದ್ದಾರೆ. ಅಂದುಕೊಂಡಂತೆ ನಡೆದರೆ ಕರ್ನಾಟಕದಲ್ಲಿ ಹೂಡಿಕೆ ಇನ್ನಷ್ಟು ಹರಿದು ಬರಲಿದ್ದು, ಹೊಸ ಕೈಗಾರಿಕೆಗಳು, ಘಟಕಗಳೂ ತಲೆಎತ್ತಲಿವೆ. ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಹಾಗೂ ಬ್ರಿಟಿಷ್ ಹೈ-ಕಮಿಷನ್ ಸಲಹೆಗಾರ ಮಂಜುನಾಥ್ ಕೆ.ಎಸ್. ಉಪಸ್ಥಿತರಿದ್ದರು.












Click it and Unblock the Notifications