ವಂದೇ ಭಾರತ್ ರೈಲು, ಹೈವೇ ರಸ್ತೆ ನೀಡಿರುವುದು ಕಾಂಗ್ರೆಸ್ ಅಲ್ಲ, ಡಬಲ್ ಇಂಜಿನ್ ಸರ್ಕಾರ: ಸಿಎಂ
ಮಂಡ್ಯ, ಡಿಸೆಂಬರ್ 30: ವಂದೇ ಭಾರತ್ ರೈಲು, ಹೈವೇ ರಸ್ತೆ ನೀಡಿರುವುದು ಕಾಂಗ್ರೆಸ್ ಅಲ್ಲ ಡಬಲ್ ಇಂಜಿನ್ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಈ ಕುರಿತು ಶುಕ್ರವಾರ ಮಂಡ್ಯದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ. ಮಂಡ್ಯ ಇಸ್ ಇಂಡಿಯಾ ಆಗಲು ಭಾಗದ ರೈತರಿಗೆ ಶಕ್ತಿ ತುಂಬಬೇಕು. ಕೈಗಾರಿಕೆಗಳೂ ಬರಬೇಕು. ಡಬಲ್ ಇಂಜಿನ್ ಸರ್ಕಾರದ ಮಹಿಮೆ ಏನೆಂದರೆ ಬೆಂಗಳೂರು- ಮೈಸೂರು ಸೂಪರ್ ಫಾಸ್ಟ್ ಹೈವೇ ಆಗಿರುವುದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ಮೇಲೆ. ಅವರೇ ಮುಂದಿನ ತಿಂಗಳು ಇದರ ಉದ್ಘಾಟನೆ ಅವರೇ ನೆರವೇರಿಸಲಿದ್ದಾರೆ. ಕೇವಲ ಒಂದೂವರೆ ಗಂಟೆಗಳಲ್ಲಿ ಬೆಂಗಳೂರು- ಮೈಸೂರು ಪ್ರಯಾಣಿಸಬಹುದು. ವಂದೇ ಭಾರತ್ ರೈಲು ಕೂಡ ಉದ್ಘಾಟನೆಯಾಗಿದೆ. ಇದು ಡಬಲ್ ಇಂಜಿನ್ ಸರ್ಕಾರ. ವಂದೇ ಭಾರತ್ ರೈಲು, ಹೈವೇ ರಸ್ತೆ ನೀಡಿರುವುದು ಕಾಂಗ್ರೆಸ್ ಅಲ್ಲ ಡಬಲ್ ಇಂಜಿನ್ ಸರ್ಕಾರ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯರವರ ಕಾಂಗ್ರೆಸ್ ಅನಿಷ್ಟ ಸರ್ಕಾರ
ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಮಾಡಲು ಮತ ಹಾಕಿ ಎಂದು ಯಾಚಿಸುತ್ತಾರೆ. ಜನರು ಅವರ 5 ವರ್ಷಗಳ ಆಡಳಿತ ನೋಡಿದ್ದಾರೆ. ಕಾಂಗ್ರೆಸ್ ಅನಿಷ್ಟ ಸರ್ಕಾರ. ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ. ಯಾವುದೇ ಇಲಾಖೆ ತೆಗೆದುಕೊಂಡರೂ ಭ್ರಷ್ಟಾಚಾರ ಮಾಡಿದ್ದಾರೆ. ಅನ್ನಭಾಗ್ಯದಲ್ಲಿ ಕನ್ನಭಾಗ್ಯಮಾಡಿದ್ದಾರೆ. 30 ರೂ. ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. 3 ರೂ.ಗಳ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿದ್ದಾರೆ. ನಿಜವಾದ ಅನ್ನದಾತ ನರೇಂದ್ರ ಮೋದಿಯವರು. ಕರೊನಾ ಬಂದಾಗ ಗರೀಬ್ ಕಲ್ಯಾಣ ಯೋಜನೆ ಜಾರಿ ಮಾಡಿ ಮುಂದಿನ ವರ್ಷಕ್ಕೂ ಯೋಜನೆ ವಿಸ್ತರಣೆ ಆಗಿದೆ. ಪ್ರತಿ ಬಡವನಿಗೆ 5 ಕೆಜಿ ಅಕ್ಕಿ ನೀಡುವ ನಿರ್ಣಯವನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಮಾಡಿದ್ದಾರೆ ಎಂದರು.

ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ ಹೆಚ್ಚಸಿ ಆದೇಶ
ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಶುಗರ್ ಕಾರ್ಖಾನೆ ನೂರಾರು ವರ್ಷಗಳಿಂದ ಮುಚ್ಚಿದ್ದರೂ ಯಾವುದೇ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿರಲಿಲ್ಲ. ಅಧಿಕಾರಿಗಳು ಈ ಕಾರ್ಖಾನೆಯನ್ನು ಮಾರಾಟ ಮಾಡಿ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರು. ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಕಾರ್ಖಾನೆಗೆ ಕಾಯಕಲ್ಪವನ್ನು ಸರ್ಕಾರಿ ವಲಯದಿಂದಲೇ ನೀಡುವುದಾಗಿ ಪಣ ತೊಟ್ಟು ಈ ವರ್ಷ ಕಬ್ಬು ಅರೆಸಲು ಪ್ರಾರಂಭಿಸಲಾಗಿದೆ ಈ ಭಾಗದ ರೈತರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಲಾಗಿದೆ.
ಬರುವ ವರ್ಷದಲ್ಲಿ ಎಥನಾಲ್ ಘಟಕ ಪ್ರಾರಂಭಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ಲಾಭದಾಯಕವಾಗಿಸಲು, ರೈತರ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತನೆ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರು, ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿಗೆ ಒತ್ತಾಯ ಮಾಡುತ್ತಿದ್ದರು. ಎಥನಾಲ್ ಉಳ್ಳವರು 50 ರೂ.ಗಳನ್ನು ಹೆಚ್ಚಿಸಲಾಗಿದೆ. ಮಾತು ಕೊಟ್ಟಂತೆ ನಡೆಯುವ ಸರ್ಕಾರ ನಮ್ಮದು ಎಂದರು.
ಎಲ್ಲಾ ವರ್ಗಗಳಿಗೂ ನ್ಯಾಯ ನೀಡಲು ಪ್ರಾಮಾಣಿಕ ಪ್ರಯತ್ನ
ನಮ್ಮ ಸರ್ಕಾರ ರೈತ ವಿದ್ಯಾ ನಿಧಿ ಯೋಜನೆಯಡಿ 10.ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಯೋಜನೆಯಿಂದ ಲಾಭ ದೊರೆತಿದೆ. ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಸಹಾಯಧನ ನೀಡುವ ಕಾಯಕ ಯೋಜನೆ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ರೂಪಿಸಿದೆ. ಸಾಮಾಜಿಕ ನ್ಯಾಯ ನೀಡುತ್ತಿರುವುದು ಭಾಜಪ . ಎಸ್.ಸಿ.ಎಸ್.ಟಿ ಮೀಸಲಾತಿ ಹೆಚ್ಚಿಸಿದೆ. ಹಿಂದುಳಿದ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಿದೆ. ಎಲ್ಲಾ ವರ್ಗಗಳಿಗೂ ನ್ಯಾಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕಪ್ಳು ಬಿಳುಪು ಸಿನಿಮಾ ನೋಡಿಯಾಗಿದೆ. ಈ ಭಾಗದ ಅಭಿವೃದ್ಧಿಗೆ ಏನಾದರೂ ಕೊಡುಗೆ ಕೊಟ್ಟಿದ್ದಾರೆ ಅದು ನಮ್ಮ ಯಡಿಯೂರಪ್ಪನವರು. ಅವರ ಜನ್ಮಭೂಮಿಯ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಬಿಜೆಪಿ ಈ ಭಾಗವನ್ನು ಸುವರ್ಣ ಕರ್ನಾಟಕವನ್ನಾಗಿಸುವ ಸಂಕಲ್ಪ ಮಾಡಿದೆ. ಈ ಭಾಗದ ಕಾವೇರಿಯ ಮಕ್ಕಳ ಬಾಳನ್ನು ಬಂಗಾರ ಮಾಡಲು ಸಂಕಲ್ಪವನ್ನು ಮಾಡಿದ್ದೇವೆ. ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ನವ ಕರ್ನಾಟಕ ದಿಂದ ನವ ಭಾರತ ಕಟ್ಟೋಣ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಅಮಿತ್ ಶಾ ಅವರು ಕಾಲಿಟ್ಟ ಮೇಲೆ ಸುನಾಮಿಯಾಗಿ 2023 ರ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ಶತಸಿದ್ದ ಎಂದರು.
ಭಾರತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಭಾರತವನ್ನು ಅತ್ಯಂತ ಶಕ್ತಿ ಶಾಲಿ ರಾಷ್ಟವನ್ನಾಗಿಸಿದೆ. ಪ್ರಗತಿಪರ ರಾಷ್ಟವಾಗಿಸಿ, ಆಂತರಿಕ ಭದ್ರತೆ ಒದಗಿಸಿ ಅಮಿತ್ ಶಾ ಅವರ ಪರಿಶ್ರಮದಿಂದ ಅಖಂಡತೆ, ಏಕತೆಯಲ್ಲಿ ವಿಶ್ವಮಾನ್ಯತೆ ಪಡೆದಿದೆ. ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರು. ಭಾರತದ ಕಾಶ್ಮೀರ, ನಕ್ಸಲರು ಸೇರಿದಂತೆ ಹಾಗೂ ಹಲವಾರು ಸಮಸ್ಯೆಗಳನ್ನು ಅತ್ಯಂತ ದಕ್ಷತೆಯಿಂದ ಬಗೆಹರಿಸಿ ದೇಶಕ್ಕೆ ಅಖಂಡತೆ ಹಾಗೂ ಏಕತೆಯನ್ನು ತಂದುಕೊಟ್ಟು ದೇಶದ ನೆಚ್ಚಿನ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಅವರು ಚುನಾವಣೆ ತಂತ್ರವನ್ನು ಹೆಣೆದಲ್ಲಿ ಯಶಸ್ಸು ದೊರೆತಿದೆ. ಗುಜರಾತಿನಲ್ಲಿ ಅಭೂತಪೂರ್ವ ವಿಜಯ ಭಾಜಪ ಗೆದ್ದಿರುವುದು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಕಾರಣದಿಂದಾಗಿ. ಕರ್ನಾಟಕದ ಚುನಾವಣೆಯಲ್ಲಿಯೂ ಭಾಜಪ ಗೆಲ್ಲುವುದು ಸೂರ್ಯ ಹುಟ್ಟುವಷ್ಟೇ ಸತ್ಯ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ
ದಕ್ಷಿಣ ಕರ್ನಾಟಕದಲ್ಲಿ ಜನರ ನಾಡಿ ಮಿಡಿತ ನಮಗೆ ತಿಳಿದಿದೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಮತಗಳನ್ನು ಪಡೆದು ಮಂತ್ರಿ , ಮುಖ್ಯಮಂತ್ರಿಗಳಾಗಿ ಈ ಭಾಗಕ್ಕೆ ನ್ಯಾಯ ಕೊಡಲು ವಿಫಲರಾಗಿದ್ದಾರೆ. ಈ ಭಾಗದ ನೀರಾವರಿ ಬಗ್ಗೆ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸಕ್ಕರೆ ಕಾರ್ಖಾನೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ರೈತಾಪಿ ವರ್ಗ, ಯುವಕರು ಮತ್ತು ಮಹಿಳೆಯರು ಭಾಜಪ ಕಡೆ ನೋಡುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಅತ್ಯಧಿಕ ಸ್ಥಾನ ಪಡೆಯುವುದು ಬಿಜೆಪಿ ಎಂದರು.
ಇನ್ನೂ ಕೆ.ಆರ್. ಎಸ್ ನಿಂದ ಹಿಡಿದು ಈ ಭಾಗದ ಕೊನೆಯ ಹಂತದವರೆಗೆ ನೀರಾವರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದೇವೆ. ಈ ವಾರದಲ್ಲಿ ನಡೆಯುವ ಕಾವೇರಿ ನೀರಾವರಿ ನಿಗಮದ ಸಭೆಯಲ್ಲಿ ಎಲ್ಲಾ ಭಾಗದ ನೀರಾವರಿಗೆ ಸರ್ಕಾರ ಕಾಯಕಲ್ಪ ನೀಡುತ್ತಿದೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಕೆ.ಗೋಪಾಲಯ್ಯ, ನಾರಾಯಣ ಗೌಡ, ಶಾಸಕರು ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications