ಕಳಸಾ ಬಂಡೂರಿ ಯೋಜನೆಗೆ ಟೀಕೆ: ಕಾಂಗ್ರೆಸ್‌ಗೆ ಬೊಮ್ಮಾಯಿ ತಿರುಗೇಟು
ಬೆಂಗಳೂರು, ಜನವರಿ 01: ಕಳಸಾ ಬಂಡೂರಿ ನಾಲಾ ಯೋಜನೆಗೆ ತಾರ್ಕಿಕ ಅಂತ್ಯ ಕಂಡು ಅನುಮೋದನೆ ದೊರೆತಿದೆ. ಇದರಲ್ಲೂ ಲೋಪದೋಷ ಹುಡುಕುತ್ತಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿ ಎಂತದ್ದು ಎಂದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳಸಾ ಬಂಡೂರಿ ಡಿಪಿಆರ್ ಕುರಿತು ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು. ಯಾವ ವಿಷಯಕ್ಕೆ ನಾವು ಹಾಗೂ ಅವರು ಹೋರಾಟ ಮಾಡಿದ್ದೇವು, ಅದಕ್ಕೆ ತಾರ್ಕಿಕ ಅಂತ್ಯ ದೊರೆತು ಕೆಲಸ ಮಾಡುವ ಪ್ರಸಂಗ ಬಂದಿದೆ. 25 ವರ್ಷಗಳ ಹೋರಾಟಕ್ಕೆ ವಿಜಯ ದೊರೆತಿದೆ. ಇದರಲ್ಲಿ ಲೋಪದೋಷಗಳನ್ನು ಹುಡುಕುವುದು ಕಾಂಗ್ರೆಸ್ ಮನಸ್ಥಿತಿಯನ್ನು ಅದು ತೋರಿಸುತ್ತದೆ. ಅವರ ಟೀಕೆ ಟಿಪ್ಪಣಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮ ದಾರಿ ಸ್ಪಷ್ಟವಾಗಿದೆ. ಡಿಪಿಆರ್ ಆಗಿದೆ, ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ವಿವರಿಸಿದರು.

ಮೀಸಲಾತಿ ವಿಚಾರ:ಅನ್ಯಾಯ ಆಗುವುದಿಲ್ಲ
ಮೀಸಲಾತಿ ಬಗ್ಗೆ ಅಂತಿಮ ಆದೇಶ ಬಂದಾಗ ಎಲ್ಲವೂ ತಿಳಿಯಲಿದೆ. ಮಧ್ಯಂತರ ಆದೇಶದಲ್ಲಿ ನಮ್ಮ ಸರ್ಕಾರದ ಉದ್ದೇಶ ಏನೆಂಬುದನ್ನು ಹೇಳಲಾಗಿದೆ. ಅಂಕಿಅಂಶಗಳು ಅಂತಿಮ ವರದಿಯಲ್ಲಿ ಬರುತ್ತದೆ. ಬಂದ ನಂತರ ಸಂಬಂಧಿಸಿದವರ ಜೊತೆ ಚರ್ಚೆ ಮಾಡಲಾಗುತ್ತದೆ.
ಯಾವುದೇ ಕಾರಣಕ್ಕೂ ಈಗಿರುವ ಹಿಂದುಳಿದ ವರ್ಗಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬಹಳ ವರ್ಷಗಳಿಂದಲೂ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಹಿನ್ನೆಡೆಯಾಗಿದೆ. ಮಧ್ಯಂತರ ಆದೇಶವನ್ನು ಒಪ್ಪಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಸ್ಪಷ್ಟೀಕರಣವನ್ನೂ ನೀಡಲಾಗುವುದು. ಅಂತಿಮ ವರದಿ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ಇದರಲ್ಲಿ ಯಾರಿಗೂ ಅನ್ಯಾಯ ವಾಗುವುದಿಲ್ಲ. ವಿರೋಧ ಪಕ್ಷದ ನಾಯಕರು ಈ ಬೇಡಿಕೆಗಳನ್ನು ತಮ್ಮ ಸರ್ಕಾರ ಇದ್ದಾಗ ಈಡೇರಿಸಲು ಸಾಧ್ಯವಾಗಿರಲಿಲ್ಲ. ನಾವು ಮಾಡುತ್ತಿರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಅಮುಲ್ ನೊಂದಿಗೆ ನಂದಿನಿ ಹಾಲು ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ, ಟೀಕೆ ಮಾಡಬಾರದು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ನಂದಿನಿ ಮತ್ತು ಅಮುಲ್ ತಾಂತ್ರಿಕ ವಾಗಿ, ಮಾರುಕಟ್ಟೆಯಲ್ಲಿ ಸಹಕಾರ ಮಾಡಬೇಕು. ಇವೆರಡೂ ದೊಡ್ಡ ಸಂಸ್ಥೆಗಳು. ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಒಟ್ಟಾಗಿ ಕೆಲಸ ಮಾಡಿದರೆ ಲಾಭ
ಯಾವುದೂ ಸಮಸ್ಯೆಯಿಲ್ಲ. ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದರ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.












Click it and Unblock the Notifications