ಪ್ರಧಾನಿ ವಿರುದ್ಧ ಖರ್ಗೆ ಟೀಕೆ: ಇಂಥ ಮಾತುಗಳಿಂದಲೇ ಕಾಂಗ್ರೆಸ್‌ಗೆ ಈ ಗತಿ ಬಂದಿದೆ: ಬೊಮ್ಮಾಯಿ ತಿರುಗೇಟು
ಹಾವೇರಿ, ಏಪ್ರಿಲ್ 27: ದ್ರೋಹಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಿಂಹಸ್ವಪ್ನವಾಗಿದ್ದಾರೆ. ಅಂತವರಿಗೆ ಮಲ್ಲಿಕಾರ್ಜುನ್ ಖರ್ಗೆಯವರು ಹೀಗನ್ನುವುದು ಎಷ್ಟರ ಮಟ್ಟಿಗೆ ಸರಿ?. ಹೀಗೆ ಮಾತನಾಡಿಯೇ ಕಾಂಗ್ರೆಸ್‌ಗೆ ಈ ಗತಿ ಬಂದಿದೆ. ಪ್ರಧಾನಿ ಮೇಲಿನ ಟೀಕೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಗುರುವಾರ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರ ಕೋಣನಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 'ಮೋದಿ ಅಂದರೆ ವಿಷ ಸರ್ಪ' ಎಂಬ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಗುಡುಗಿದರು.

ನಾವು ಖರ್ಗೆಯವರ ಹಿರಿತನಕ್ಕೆ ಗೌರವ ಕೊಡುತ್ತೇವೆ. ಭಯೋತ್ಪಾದಕರಿಗೆ, ರಾಷ್ಟ್ರ ವಿರೋಧಿಗಳಿಗೆ, ಶಾಂತಿ ಕದಡುವವರಿಗೆ ಪ್ರಧಾನಿ ಮೋದಿ ಸಿಂಹಸ್ವಪ್ನ ವಾಗಿದ್ದಾರೆ. ಅಂತವರಿಗೆ ಖರ್ಗೆ ಹಿಗನ್ನಬೇಕು ಎಂದು ಯಾಕೆ ಅನ್ನಿಸಿತೋ ಗೊತ್ತಿಲ್ಲ. ದೇಶದ ಪ್ರಧಾನಿಗಳಿಗೆ ಈ ರೀತಿ ಮಾತನಾಡುವುದು ಸರಿಯೇ? ಹಿಂದೆ ಹೀಗೆ ಮಾತನಾಡಿಯೇ ಕಾಂಗ್ರೆಸ್ ದೇಶದಲ್ಲಿ ಸೋಲು ಕಂಡಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ. ಹಿಂದಿನ ಅಮಲಿನಲ್ಲಿಯೇ ಇನ್ನೂ ಮಾತನಾಡುತ್ತಿದ್ದಾರೆ. ಕರ್ನಾಟಕ ಸುಸಂಸ್ಕೃತ ನಾಡು.ಇಲ್ಲಿ ಎಲ್ಲರಿಗೂ ನಾವು ಗೌರವವನ್ನು ಕೊಡುತ್ತೀವಿ. ಖರ್ಗೆ ಅವರ ವಿಚಾರಗಳ ಬಗ್ಗೆ ವಿರೋಧ ಇದ್ದರೂ ಅವರ ಹಿರಿತನಕ್ಕೆ ನಾವು ಗೌರವ ಕೊಡುತ್ತೇವೆ. ಹಿರಿಯರಾಗಿ ಅವರು ಈ ರೀತಿ ಮಾತನಾಡಿದ್ದು ಖೇದಕರ ಎಂದರು.
ಕಾಂಗ್ರೆಸ್ ಗೆ ಸೋಲಿನ ಭೀತಿ ಹುಟ್ಟಿಕೊಂಡಿದೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬ್ಯಾನ್ ಮಾಡಬೇಕು ಎಂದು ಡಿಕೆ ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಪಿಟಿಷನ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅವರಿಗೆ ಸೋಲಿನ ಭೀತಿ ಎದುರಾಗಿದೆ. ತಾವು ಸೋಲುತ್ತೀವಿ ಎಂದು ಗೊತ್ತಾದಾಗ ಹೀಗಾಗಿ ಪಿಟಿಷನ್ ಕೊಡೋದು, ಚುನಾವಣಾ ಆಯೋಗಕ್ಕೆ ದೂರು ಕೊಡುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾನೂನು ಪ್ರಕಾರ ಏನು ಆಗಬೇಕೋ ಆಗಲಿದೆ. ಅದರಲ್ಲಿ ಯಾವುದೇ ಸತ್ಯ ಇಲ್ಲ, ಯಾವುದೇ ಹುರುಳಿಲ್ಲ. ಅದು ತಿರಸ್ಕಾರವಾಗುತ್ತದೆ ಎಂದು ಕಿಡಿ ಕಾರಿದರು.

ಕ್ಷೇತ್ರದ ಎಲ್ಲಾ ಹಳ್ಳಿಹಳ್ಳಿಗಳಿಗೆ ನಾನು ಭೇಟಿ ಕೊಡುತ್ತಿದ್ದೇನೆ. ನಿರೀಕ್ಷೆ ಮೀರಿ ಅಭೂತಪೂರ್ವ ಬೆಂಬಲ ನನಗೆ ಸಿಗುತ್ತಿದೆ. ಇದು ಮುಖ್ಯಮಂತ್ರಿ ಕ್ಷೇತ್ರವಾಗಿದೆ. ಜತೆಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಅತಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕೆಂದು ಜನ ಭಾವನೆ ಹೊಂದಿದ್ದಾರೆ. ಆದ್ದರಿಂದ ದಾಖಲೆ ಮತಗಳಿಂದ ಜನ ನನ್ನನ್ನು ಆಯ್ಕೆ ಮಾಡುತ್ತಾರೆ ಅನ್ನೋ ವಿಶ್ವಾಸ ನನ್ನಲ್ಲಿದೆ. ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ಪ್ರಚಾರ ಕುರಿತು ವಿವರಿಸಿದರು.
ಶೋಭಾ ಕರಂದ್ಲಾಜೆ ನಡೆ ಸಮರ್ಥಿಸಿಕೊಂಡ ಸಿಎಂ
ಜಿಲ್ಲಾದ್ಯಕ್ಷರಿಗೆ ಸೂಕ್ಷ್ಮ ಅತೀಸೂಕ್ಷ್ಮ ಮತಗಟ್ಟೆಗಳ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿದ ಬೊಮ್ಮಾಯಿಯವರು, ಕಾಂಗ್ರೆಸ್ ಪಕ್ಷ ತೋಳಬಲ, ಹಣ ಬಲದಿಂದ ಚುನಾವಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಹಿಂದೆ ಹಲವು ಸಂದರ್ಭಗಳಲ್ಲಿ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ಅದು ಆಗಬಾರದು ಎಂದು ನಮ್ಮ ರಕ್ಷಣೆಗೆ, ನಮ್ಮ ಮತದಾರರ ಸುರಕ್ಷತೆಗೆ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪುಂಡಾಟಿಕೆಯಲ್ಲಿ ನಮ್ಮ ಜನರಿಗೆ ಹಿಂಸೆ ಆಗಬಾರದು ಎಂದು ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ರಾಜಕೀಯ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಇದರಲ್ಲಿ ಏನು ಬಹಳ ದೊಡ್ಡ ಅಪರಾಧವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೋ ಗೊತ್ತಿಲ್ಲ. ಚುನಾವಣಾ ಆಯೋಗ ತನ್ನ ಕೆಲಸ ಮಾಡುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.












Click it and Unblock the Notifications